ಕಾನ್ಪುರ: 'ಯುಪಿಯ ಬಪ್ಪಿ ಲಹಿರಿ' ಎಂದು ಕರೆಯಲ್ಪಡುವ ಕಾನ್ಪುರದ ಈ ವ್ಯಕ್ತಿ ಚಿನ್ನದಿಂದ ಮಾಡಿದ ಮಾಸ್ಕ್ನ್ನು ಖರೀದಿ ಮಾಡಿ ಸುದ್ದಿಯಲ್ಲಿದ್ದಾರೆ. ಮನೋಜನಂದ್ ಮಹಾರಾಜ್ ಎಂದು ಕರೆಯಲ್ಪಡುವ ಮನೋಜ್ ಸೆಂಗಾರ್ ಚಿನ್ನದ ಮಾಸ್ಕ್ ಖರೀದಿ ಮಾಡಲು ಬರೋಬ್ಬರಿ 5 ಲಕ್ಷ ರೂ. ಖರ್ಚು ಮಾಡಿದ್ದಾರಂತೆ. ಅಷ್ಟೇ ಅಲ್ಲದೆ ಈ ಮಾಸ್ಕ್ನೊಳಗೆ ಸ್ಯಾನಿಟೈಸರ್ ದ್ರಾವಣವೂ ಇದ್ದು, ಅದು 36 ತಿಂಗಳ ಕಾಲ ಕೆಲಸ ಮಾಡುತ್ತದೆ.
ಈ ಮಾಸ್ಕ್ಗೆ 'ಶಿವ ಶರಣ್ ಮಾಸ್ಕ್' ಎಂದು ಹೆಸರಿಟ್ಟಿದ್ದಾರೆ. ಮನೋಜ್, ಭಾರತದ ಖ್ಯಾತ ಗಾಯಕ ಬಪ್ಪಿ ಲಹಿರಿ ಅವರಂತೆ ಚಿನ್ನದ ಬಗ್ಗೆ ಒಲವು ಹೊಂದಿದ್ದಾರೆ. ಪ್ರತೀದಿನ ನಾಲ್ಕು ಚಿನ್ನದ ಸರಪಣಿಗಳನ್ನು ಧರಿಸುತ್ತಾರೆ. ಈ ಸರಪಣಿಗಳು 250 ಗ್ರಾಂ ತೂಗುತ್ತವೆ. ಮನೋಜ್ ಬಳಿ ಸದ್ಯ ಶಂಖ ಚಿಪ್ಪು, ಮೀನು ಮತ್ತು ಭಗವಾನ್ ಹನುಮನ ಲಾಕೆಟ್ ಇದ್ದು, ಇವೆಲ್ಲವೂ ಚಿನ್ನದಿಂದ ಮಾಡಲ್ಪಟ್ಟಿವೆ.
ಇದಲ್ಲದೆ, ಒಂದು ಜೋಡಿ ಚಿನ್ನದ ಕಿವಿಯೋಲೆ, ರಿವಾಲ್ವರ್‌ಗೆ ಚಿನ್ನದ ಹೊದಿಕೆ ಮತ್ತು ಮೂರು ಚಿನ್ನದ ಬೆಲ್ಟ್‌ಗಳನ್ನು ಖರೀದಿ ಮಾಡಿದ್ದಾರೆ. ಮನೋಜ್ನನ್ನು ಕಾನ್ಪುರದ 'ಗೋಲ್ಡನ್ ಬಾಬಾ' ಎಂದೂ ಕರೆಯುತ್ತಾರೆ. "ಚಿನ್ನದ ಮೇಲಿನ ಪ್ರೀತಿ, ನನಗೆ ಸಮಾಜದಿಂದ ಬೆದರಿಕೆ ಬರುವಂತೆ ಮಾಡಿದೆ. ಹೀಗಾಗಿ ನಾನು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನನ್ನನ್ನು ರಕ್ಷಿಸಲು ಇಬ್ಬರು ಸಶಸ್ತ್ರ ಅಂಗರಕ್ಷಕರನ್ನು ಹೊಂದಿದ್ದೇನೆ" ಎಂದು ಹೇಳಿದ್ದಾರೆ. .