ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಇತರ ಪಳೆಯುಳಿಕೆ ಸಂಪನ್ಮೂಲಗಳ ನಿರಂತರ ಬಳಕೆಯಿಂದ ಭೂಮಿಯ ತಾಪಮಾನವು ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಇದು ವಿಶ್ವದಾದ್ಯಂತ ಲಕ್ಷಾಂತರ ಜನರ ಮೇಲೆ ವಿನಾಶಕಾರಿ ಪರಿಣಾಮವನ್ನುಂಟು ಮಾಡಿದೆ. ಈಗಲಾದರೂ ನಾವು ಈ ವಿಷಯದಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ವಿಫಲವಾದರೆ ಪರಿಸರ ಮಾತ್ರವಲ್ಲದೆ ಇಡೀ ಮಾನವ ಕುಲಕ್ಕೇ ಗಂಡಾಂತರ ಕಾದಿದೆ.
ಭೂಮಿಯಲ್ಲಿರುವ ಪಳೆಯುಳಿಕೆ ಇಂಧನಗಳನ್ನು ಹೊರತೆಗೆಯುವುದು ಮತ್ತು ಅವುಗಳನ್ನು ದಹಿಸುವುದರಿಂದ ನಮ್ಮ ಗ್ರಹದ ಸೂಕ್ಷ್ಮ ಪರಿಸರ ವ್ಯವಸ್ಥೆಗಳ ಮೇಲಾಗುವ ದುಷ್ಪರಿಣಾಮಗಳು ನಮಗೆ ಕಾಣಿಸುತ್ತಿವೆ. ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಇತರ ಪಳೆಯುಳಿಕೆ ಸಂಪನ್ಮೂಲಗಳ ನಿರಂತರ ಬಳಕೆಯು ಭೂಮಿಯ ತಾಪಮಾನದಲ್ಲಿ ಅಪಾಯಕಾರಿ ಏರಿಕೆಗೆ ಕಾರಣವಾಗಿದೆ. ಒಮ್ಮೆ ವಾತಾವರಣಕ್ಕೆ ಬಿಡುಗಡೆಯಾದ ಇಂಗಾಲದ ಡೈಆಕ್ಸೈಡ್ ಮತ್ತು ನೈಟ್ರಸ್ ಆಕ್ಸೈಡ್ ನ ಉಪಸ್ಥಿತಿಯು ಶತಮಾನಗಳವರೆಗೆ ಉಳಿಯುತ್ತದೆ. ಇದು ವಿನಾಶಕಾರಿ ಅನಿಲಗಳಾಗಿ ರೂಪಾಂತರಗೊಳ್ಳುತ್ತದೆ. ನಮ್ಮ ಭೂಮಿಯ ಋತುಗಳು ಪರಿವರ್ತನೆಯಾಗುತ್ತಿವೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದ ಋತುಗಳು ಬದಲಾಗುತ್ತಿವೆ.
ಸಮುದ್ರ ಮಟ್ಟದಲ್ಲಿ ಹೆಚ್ಚುತ್ತಿರುವ ಉಬ್ಬರವಿಳಿತವು ವಿನಾಶಕಾರಿ ಬಿರುಗಾಳಿಗಳು ಮತ್ತು ಪ್ರವಾಹಗಳನ್ನು ಉಂಟು ಮಾಡುತ್ತಿದೆ. ಆದರೆ ಅನಿರೀಕ್ಷಿತ ಧಾರಾಕಾರ ಮಳೆ ಮತ್ತು ದೀರ್ಘಕಾಲದ ಬರಗಾಲವು ಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಮತ್ತು ನಾಶಪಡಿಸಿದೆ. ಕಳೆದ ಅರ್ಧ ಶತಮಾನದಲ್ಲಿ 12,000 ನೈಸರ್ಗಿಕ ವಿಪತ್ತುಗಳು ನಮ್ಮ ಜಗತ್ತನ್ನು ನಿರಂತರವಾಗಿ ನಾಶಪಡಿಸಿವೆ. ಇವು ಸುಮಾರು 25 ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡಿವೆ ಮತ್ತು 35 ಲಕ್ಷ ಕೋಟಿ ರೂ.ಗಳ ಆಸ್ತಿಪಾಸ್ತಿ ಹಾನಿಯನ್ನು ಉಂಟುಮಾಡಿವೆ. ಜಾಗತಿಕ ತಾಪಮಾನದ ನಿರಂತರ ಏರಿಕೆಯಿಂದ ಹಲವಾರು ರಾಷ್ಟ್ರಗಳಲ್ಲಿನ ಕೃಷಿ ಇಳುವರಿಗಳು ಒಣಗಿಹೋಗಿವೆ. ಇದು ನಮ್ಮ ಆಹಾರ ಭದ್ರತೆಯನ್ನು ಮತ್ತಷ್ಟು ಅಪಾಯಕ್ಕೆ ಸಿಲುಕಿಸಿದೆ. ಈ ಸನ್ನಿಹಿತ ವಿಪತ್ತನ್ನು ಎದುರಿಸುವ ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಬಹುರಾಷ್ಟ್ರೀಯ ನಿಗಮಗಳ ಸಿಇಒಗಳು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವೀಕರಿಸಬಹುದಾದ ಇಂಧನ ಮೂಲಗಳನ್ನು ತಮ್ಮ ಆದ್ಯತೆಗಳ ಉತ್ತುಂಗದಲ್ಲಿರಿಸುವಂತೆ ಸರ್ಕಾರಗಳನ್ನು ಕೋರಿ ಅವರು ಬಹಿರಂಗ ಪತ್ರ ಹೊರಡಿಸಿದ್ದಾರೆ. ಈ ಮನವಿಯು ವಿಶ್ವದಾದ್ಯಂತದ 40 ಲಕ್ಷ ವಿದ್ಯಾರ್ಥಿಗಳ ಬೃಹತ್ ಧ್ವನಿಯನ್ನು ಪ್ರತಿಧ್ವನಿಸುತ್ತದೆ. ಇವರೆಲ್ಲ ನಾಲ್ಕು ವರ್ಷಗಳ ಹಿಂದೆ, ತಮ್ಮ ಪೀಳಿಗೆಯ ಭವಿಷ್ಯಕ್ಕಾಗಿ ಉತ್ತರದಾಯಿತ್ವಕ್ಕಾಗಿ ಒತ್ತಾಯಿಸಿ ಬೀದಿಗಿಳಿದರು. ಸ್ವೀಡನ್ನ ಮ್ಯಾಡ್ರಿಡ್ನಲ್ಲಿ ನಡೆದ ಸಿಒಪಿ 25 ರಲ್ಲಿ ಗ್ರೆಟಾ ಥನ್ಬರ್ಗ್ ಮತ್ತು ಅವರ ಬೆಂಬಲಿಗರಿಂದ ಪ್ರೇರಿತರಾದ ಕಾರ್ಯಕರ್ತರು ವಿಶ್ವಾದ್ಯಂತದ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಘೋಷಣೆ ಮೊಳಗಿಸಿದರು.
ಇಂಗಾಲದ ಹೊರಸೂಸುವಿಕೆಯನ್ನು ನಿಗ್ರಹಿಸಲು ತಕ್ಷಣದ ನೀತಿ ಮಧ್ಯಸ್ಥಿಕೆಗಳ ಅಗತ್ಯವನ್ನು ಒತ್ತಿಹೇಳಲು ಸಿಇಒಗಳ ಗುಂಪು ಸಭೆ ಸೇರಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಹೂಡಿಕೆಗಳನ್ನು ಮೂರು ಪಟ್ಟು ಹೆಚ್ಚಿಸುವಂತೆ ಈ ಸಿಇಒಗಳು ಶಿಫಾರಸು ಮಾಡಿದ್ದಾರೆ. ಈಗ ಉಳಿದಿರುವ ಪ್ರಶ್ನೆ ಏನೆಂದರೆ: 2030 ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಅರ್ಧದಷ್ಟು ಕಡಿಮೆ ಮಾಡುವ ಕಡ್ಡಾಯ ಗುರಿಯನ್ನು ಪೂರೈಸಲು ಸರ್ಕಾರಗಳು ತ್ವರಿತವಾಗಿ ಕಾರ್ಯನಿರ್ವಹಿಸುತ್ತವೆಯೇ ಹಾಗೂ ಇದರಿಂದಾಗಿ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್ ಮಿತಿಯೊಳಗೆ ತರಬಹುದೇ?
ಎರಡು ವರ್ಷಗಳ ಹಿಂದೆ, ಗ್ಲ್ಯಾಸ್ಗೋದಲ್ಲಿ ನಡೆದ ಸಿಒಪಿ 26 ಶೃಂಗಸಭೆಯಲ್ಲಿ ಜಾಗತಿಕ ತಾಪಮಾನ ಏರಿಕೆಯ ತಡೆಗೆ ಭಾರತ ದೃಢವಾದ ಬದ್ಧತೆ ತೋರಿಸಿತ್ತು. ಅಸಾಧಾರಣ ಘೋಷಣೆಯಲ್ಲಿ ಭಾರತವು 2070 ರ ವೇಳೆಗೆ ಇಂಗಾಲದ ತಟಸ್ಥತೆಯ ಸ್ಥಿತಿಯಾದ 'ನಿವ್ವಳ ಶೂನ್ಯ' ಸ್ಥಿತಿಯನ್ನು ಸಾಧಿಸಲು ಪ್ರತಿಜ್ಞೆ ಮಾಡಿತು. ಇಂಧನ, ಸಾರಿಗೆ, ನಗರ ಯೋಜನೆ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಒಳಗೊಂಡ ವಿವಿಧ ನಿರ್ಣಾಯಕ ಕ್ಷೇತ್ರಗಳಲ್ಲಿ ಪರಿಸರ ಸ್ನೇಹಿ ಉಪಕ್ರಮಗಳಿಗೆ ಆದ್ಯತೆ ನೀಡುವ ಕಾರ್ಯತಂತ್ರದ ದೃಷ್ಟಿಕೋನವನ್ನು ಭಾರತ ಹೊಂದಿದೆ. ಭಾರತ ಸರ್ಕಾರವು ಉದ್ದೇಶದಲ್ಲಿ ಏಕತೆ ಮತ್ತು ವಿಧಾನದಲ್ಲಿ ವೈವಿಧ್ಯತೆಯ ಅಗತ್ಯವನ್ನು ಗುರುತಿಸಿತು.
ಅಂತರರಾಷ್ಟ್ರೀಯ ಸಹಕಾರದ ಯತ್ನವಾಗಿ ಭಾರತವು ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ಸ್ಥಾಪಿಸಲು ಉಪಕ್ರಮ ಕೈಗೊಂಡಿತು. ಇದು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಅಚಲ ಸಮರ್ಪಣೆಗೆ ಸಾಕ್ಷಿಯಾಗಿದೆ. ವೈಯಕ್ತಿಕ ಗೃಹ ಬಳಕೆಯಿಂದ ಹಿಡಿದು ವ್ಯಾಪಕ ಅಭಿವೃದ್ಧಿ ಪ್ರಯತ್ನಗಳವರೆಗೆ ಸೌರ ಶಕ್ತಿಯ ಮಿತಿಯಿಲ್ಲದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಈ ಮೈತ್ರಿಯನ್ನು ಬಳಸಿಕೊಳ್ಳಲಾಗಿದೆ. ಸುಸ್ಥಿರ ಸೌರಶಕ್ತಿ ಅಭಿವೃದ್ಧಿಯತ್ತ ಭಾರತದ ಉಪಕ್ರಮವು ರಾಷ್ಟ್ರಕ್ಕೆ ಪ್ರಯೋಜನವನ್ನು ನೀಡುವುದಲ್ಲದೆ, ಹಸಿರು ಭವಿಷ್ಯದ ಅನ್ವೇಷಣೆಯಲ್ಲಿ ಜಾಗತಿಕ ಸಮುದಾಯಕ್ಕೆ ಕೈ ಚಾಚುತ್ತದೆ. ಆದರೂ, ಹವಾಮಾನ ಬದಲಾವಣೆಯನ್ನು ತಗ್ಗಿಸುವ ಪ್ರಯಾಣವು ಎಲ್ಲರನ್ನೂ ಒಳಗೊಂಡ ಪ್ರಯತ್ನವಾಗಿದೆ ಮತ್ತು ಭಾರತವು ಒಂದು ರಂಗದಲ್ಲಿ ಮುಂದಿದ್ದರೆ, ಇತರ ರಾಷ್ಟ್ರಗಳು ತಮ್ಮದೇ ಆದ ಸವಾಲುಗಳನ್ನು ಎದುರಿಸುತ್ತಿವೆ.
ಉದಾಹರಣೆಗೆ ನೋಡುವುದಾದರೆ, ಯುನೈಟೆಡ್ ಸ್ಟೇಟ್ಸ್, ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸೇರಿದರೂ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ತನ್ನ ಮಹತ್ವಾಕಾಂಕ್ಷೆಯ ಬದ್ಧತೆಗಳನ್ನು ಪೂರೈಸಲು ಹೆಣಗಾಡುತ್ತಿದೆ. ಇದೇ ರೀತಿಯ ಸ್ಥಿತಿಯನ್ನು ಅನೇಕ ರಾಷ್ಟ್ರಗಳು ಎದುರಿಸುತ್ತಿವೆ. ಅದೇನೇ ಇದ್ದರೂ, 2030 ರ ವೇಳೆಗೆ ಅರಣ್ಯನಾಶವನ್ನು ಕೊನೆಗೊಳಿಸುವ ಮತ್ತು ಅದೇ ಸಮಯದೊಳಗೆ ಮೀಥೇನ್ ಹೊರಸೂಸುವಿಕೆಯನ್ನು 30% ರಷ್ಟು ಕಡಿಮೆ ಮಾಡುವ ಬ್ಯಾನರ್ ಅಡಿಯಲ್ಲಿ ಸುಮಾರು 100 ದೇಶಗಳು ಒಗ್ಗೂಡಿವೆ, ಇದು ಪರಿಸರವನ್ನು ರಕ್ಷಿಸುವ ಸಾಮೂಹಿಕ ಸಂಕಲ್ಪವನ್ನು ದೃಢಪಡಿಸುತ್ತದೆ. 1995 ರಲ್ಲಿ ಬರ್ಲಿನ್ ನಿಂದ ಕಳೆದ ವರ್ಷ ಈಜಿಪ್ಟ್ ನ ಶರ್ಮ್ ಎಲ್-ಶೇಖ್ ವರೆಗೆ ವಿವಿಧ ಸಮ್ಮೇಳನಗಳ ಮೂಲಕ, ಜಾಗತಿಕ ಸಮುದಾಯವು ಪರಿಸರ ಸಮಸ್ಯೆಗಳನ್ನು ಪರಿಹರಿಸಲು ಪದೇ ಪದೇ ಸಭೆ ಸೇರಿದೆ.
ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಆತಂಕಕಾರಿ ಹೆಚ್ಚಳದ ಹೊರತಾಗಿಯೂ, ಸಿಒಪಿ 27 ರಲ್ಲಿ ಪಳೆಯುಳಿಕೆ ಇಂಧನ ಬಳಕೆಯನ್ನು ಕಡಿತಗೊಳಿಸಲು ಬದ್ಧವಾಗಿರಲು ವಿಫಲವಾದ ರಾಷ್ಟ್ರಗಳ ಅಸಮರ್ಥತೆಯಿಂದ ವಿಶ್ವಾದ್ಯಂತ ಪರಿಸರವಾದಿಗಳು ನಿರಾಶೆಗೊಂಡಿದ್ದಾರೆ. ದುಬೈನಲ್ಲಿ ಶೀಘ್ರದಲ್ಲೇ ಸಭೆ ಸೇರಲಿರುವ ಸಿಒಪಿ 28 ಗಾಗಿ ಜಗತ್ತು ಸಜ್ಜಾಗುತ್ತಿರುವಾಗ, ಅಪಾಯಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಜೈವಿಕ ಡೀಸೆಲ್, ಎಥೆನಾಲ್, ಪ್ರೊಪೇನ್ ಮತ್ತು ಹೈಡ್ರೋಜನ್ ನಂತಹ ಪರ್ಯಾಯ ಇಂಧನಗಳ ಶಿಫಾರಸಿನಲ್ಲಿ ತಜ್ಞರು ಸರ್ವಾನುಮತ ಹೊಂದಿದ್ದಾರೆ. ಭಾರತೀಯ ರೈಲ್ವೆಯನ್ನು ವಿದ್ಯುದ್ದೀಕರಿಸುವ ನಿರೀಕ್ಷೆ, ಇಂಗಾಲದ ಹೊರಸೂಸುವಿಕೆಯನ್ನು ವಾರ್ಷಿಕವಾಗಿ 34 ಲಕ್ಷ ಟನ್ ಗಳಿಗಿಂತ ಹೆಚ್ಚು ಕಡಿಮೆ ಮಾಡುವ ಸಾಧ್ಯತೆಯು ಪರಿಸರ ಸಂರಕ್ಷಣೆಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತದೆ.
ಸಂದೇಶ ಸ್ಪಷ್ಟವಾಗಿದೆ: ಜಾಗತಿಕ ತಾಪಮಾನ ಏರಿಕೆಗೆ ಯಾವ ರಾಷ್ಟ್ರ ಕಾರಣವಾಗಿದೆ ಎಂಬುದನ್ನು ಲೆಕ್ಕಿಸದೆ, ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಸಾಮೂಹಿಕ ಪರಿಣಾಮಗಳನ್ನು ಇಡೀ ಜಗತ್ತೇ ಎದುರಿಸುತ್ತಿದೆ. ಈ ಜಾಗತಿಕ ಸವಾಲಿನ ಸಮಯದಲ್ಲಿ ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ವಿಫಲವಾದರೆ ನಮ್ಮ ಪರಿಸರಕ್ಕೆ ಮಾತ್ರವಲ್ಲ, ಮಾನವೀಯತೆಯ ಭವಿಷ್ಯಕ್ಕೂ ಆತಂಕ ಎದುರಾಗಲಿದೆ.
ಇದನ್ನೂ ಓದಿ: ಇನ್ನು ಈ ಫೋನ್ಗಳಲ್ಲಿ ಕೆಲಸ ಮಾಡಲ್ಲ ವಾಟ್ಸ್ಆ್ಯಪ್! ನಿಮ್ಮದು ಯಾವ ವರ್ಷನ್ ನೋಡಿಕೊಳ್ಳಿ..