ಗಾಜಿಯಾಬಾದ್: ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತ ಪ್ರತಿಭಟನೆಯನ್ನು ವಿರೋಧಿಸಿ ಗಾಜಿಪುರ ಗಡಿ ಬಳಿ ಸ್ಥಳೀಯರು ಧರಣಿ ನಡೆಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 80 ದಿನಗಳಿಂದ ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಜ. 26 ರ ಗಣರಾಜ್ಯೋತ್ಸವದಂದು ಕೆಂಪುಕೋಟೆಯಲ್ಲಿ ಹಿಂಸಾಚಾರ ನಡೆಸಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಗಡಿಯ ಸಮೀಪದ ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರಕ್ಕೆ ತಡೆ ಒಡ್ಡಿದ್ದಾರೆ.
ಓದಿ: ದೇಶದಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ 1.9 ಕೋಟಿಗೆ ಏರಿಕೆ: 82 ಲಕ್ಷ ಮಂದಿಗೆ ವ್ಯಾಕ್ಸಿನ್
ಇದರಿಂದ ಗಾಜಿಪುರ ಗಡಿಯಲ್ಲಿ ವಾಸಿಸುತ್ತಿರುವ ಸ್ಥಳೀಯರು ಗಾಜಿಯಾಬಾದ್ ಜಿಲ್ಲೆಯಿಂದ ದೆಹಲಿಗೆ ಪ್ರಯಾಣಿಸಲು ಸರಿಯಾದ ವಾಹನ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ. ಕಚೇರಿಗಳಿಗೆ ತೆರಳಲು ಒಂದು ಗಂಟೆಗೂ ಅಧಿಕ ಸಮಯ ಕಾಯಬೇಕಾದ ಪರಿಸ್ಥಿತಿ ಇದೆ. ಇದನ್ನೆಲ್ಲ ವಿರೋಧಿಸಿ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ನಿವಾಸಿಗಳು ಧರಣಿ ನಡೆಸಿದರು.
ಬಳಿಕ ಪ್ರತಿಭಟನಾನಿರತರು ಆಡಳಿತಾಧಿಕಾರಿಗಳಿಗೆ ಈ ಕುರಿತಂತೆ ಮನವಿ ಪತ್ರ ಸಲ್ಲಿಸಿ, ಶೀಘ್ರವಾಗಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.