ಹೈಲಕಂಡಿ: ಅಸ್ಸೋಂ ಮತ್ತು ಮಿಜೋರಾಂ ಗಡಿಯಲ್ಲಿ ಮತ್ತೊಂದು ಹೊಸ ಸಮಸ್ಯೆ ಉದ್ಭವವಾಗಿದ್ದು, ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿ, ಆಸ್ತಿ ಪಾಸ್ತಿಯನ್ನು ನಾಶಪಡಿಸಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಪಿಎಂ ಸಡಕ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ವಿಚಾರಕ್ಕೆ ಹೈಲಕಂಡಿ ಜಿಲ್ಲೆಯ ಕಟ್ಲಿಚೆರಾ ಕ್ಷೇತ್ರದ ಜನರು ಮತ್ತು ಅಸ್ಸೋಂ-ಮಿಜೋರಾಂ ಗಡಿಯ ಇನ್ನೊಂದು ಬದಿಯಲ್ಲಿ ವಾಸಿಸುವ ಜನರ ನಡುವೆ ಗಲಾಟೆ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಸ್ಸೋಂ ಮತ್ತು ಮಿಜೋರಾಂನ ಪೊಲೀಸರ ಹಸ್ತಕ್ಷೇಪದ ನಂತರ ಈ ಗಲಾಟೆಯನ್ನು ನಿಲ್ಲಿಸಲಾಗಿತ್ತು. ಆದ್ರೆ ರಾತ್ರಿಯಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ದುಷ್ಕರ್ಮಿಗಳು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಎರಡೂ ಕಡೆ ದೊಡ್ಡ ಪ್ರಮಾಣದ ಹಾನಿಯಾಗಿದೆ.
ಓದಿ: ಬಿಜೆಪಿಯ ಕಮಲ ಅರಳಿದಾಗ ಮಾತ್ರ ಪಶ್ಚಿಮ ಬಂಗಾಳದ ಅಭಿವೃದ್ಧಿ ಸಾಧ್ಯ: ಜೆ.ಪಿ. ನಡ್ಡಾ
ಮಿಜೋರಾಂ ಕಡೆಯ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕೊಚುರ್ತಾಲ್ ಪ್ರದೇಶದಲ್ಲಿರುವ ಕನಿಷ್ಠ 54 ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಸ್ಸೋಂ ಕಡೆಯ ಜನರು ಆರೋಪಿಸಿದ್ದಾರೆ.
ಅಸ್ಸೋಂ ಕಡೆಯ ದುಷ್ಕರ್ಮಿಗಳ ಗುಂಪು ಮಿಜೋರಾಂ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರ ಮನೆಗೆ ನುಗ್ಗಿ, ಅವರ ಪತ್ನಿ, ಮಗ ಮತ್ತು ಮಗಳನ್ನು ಥಳಿಸಿದ್ದಾರೆ ಎಂದು ಮಿಜೋರಾಂ ಕಡೆಯ ಜನರ ಆರೋಪವಾಗಿದೆ. ಈ ಒಂದು ಘಟನೆಯಿಂದ ಇದೀಗ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.