ಚೆನ್ನೈ(ತಮಿಳುನಾಡು): ಕೃಷ್ಣಗಿರಿ ಜಿಲ್ಲೆಯ ಪಳಯಪೇಟೆಯಲ್ಲಿನ ಪಟಾಕಿ ಗೋದಾಮಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 8 ಜನರು ಸಾವನ್ನಪ್ಪಿದ್ದು, ಹಲವರಿಗೆ ಸುಟ್ಟ ಗಾಯಗಳಾಗಿವೆ. ಪಟಾಕಿ ಗೋದಾಮಿನ ಮಾಲೀಕ ರವಿ (45), ಅವರ ಪತ್ನಿ ಜಯಶ್ರೀ (40), ರಿತಿಕಾ (17), ರಿತೀಶ್ (15), ಇಬ್ರಾ (22), ಸಿಮ್ರಾನ್ (20), ಸರಸು (50) ಹಾಗೂ ರಾಜೇಶ್ವರಿ (50) ಮೃತರು.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈವರೆಗೆ 20ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೃಷ್ಣಗಿರಿ ಜಿಲ್ಲಾಧಿಕಾರಿ ಸರಯು, ಎಸ್ಪಿ ಸರೋಜ್ ಕುಮಾರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಾಥಮಿಕ ತನಿಖೆಯ ಪ್ರಕಾರ 'ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ದುರಂತ ಸಂಭವಿಸಿದೆ' ಎಂದು ಹೇಳಲಾಗುತ್ತಿದೆ.
ಪಾರುಗಾಣಿಕಾ ಮತ್ತು ಅಗ್ನಿಶಾಮಕ ತಂಡಗಳು ಅಪಘಾತದ ಸ್ಥಳದಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡುತ್ತಿವೆ. ಅವಘಡದಲ್ಲಿ ಸಿಲುಕಿರುವ ಕೆಲವರನ್ನು ರಕ್ಷಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. 20 ಜನರನ್ನು ಚಿಕಿತ್ಸೆಗಾಗಿ ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಘಟನೆ ನಡೆದದ್ದು ಹೇಗೆ?: "ಗೋಡೌನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಶೇಖರಣೆ ಮಾಡಿ ಇಡಲಾಗಿತ್ತು. ಇಂದು ಬೆಳಗ್ಗೆ 9.45ರ ಸುಮಾರಿಗೆ ಗೋಡೌನ್‌ನಲ್ಲಿ ಇರಿಸಲಾಗಿದ್ದ ಪಟಾಕಿಗಳು ಒಂದೊಂದಾಗಿ ಸಿಡಿಯಲಾರಂಭಿಸಿದವು. ಇದರಿಂದಾಗಿ ಏಕಾಏಕಿ ಪಟಾಕಿ ಗೋಡೌನ್ ಸ್ಪೋಟಗೊಂಡಿದೆ. ಪಟಾಕಿ ಅಂಗಡಿ, ಹೋಟೆಲ್ ಸೇರಿದಂತೆ ಇತರ ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದ್ದು, ಸಮೀಪದ ಮನೆಗಳಿಗೆ ಬೆಂಕಿ ತಗುಲಿದೆ" ಎಂದು ಕೃಷ್ಣಗಿರಿ ಜಿಲ್ಲಾಧಿಕಾರಿ ಕೆ.ಎಂ.ಸರಯು ತಿಳಿಸಿದ್ದಾರೆ. ಒಂದು ಅಂಗಡಿ ಮತ್ತು ಮೂರು ಮನೆಗಳು ಕುಸಿದಿವೆ. ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವಶೇಷಗಳಡಿ ಸಿಲುಕಿದವರ ನಿಖರ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮುಂದುವರೆದ ತನಿಖೆ: ಕೃಷ್ಣಗಿರಿ ನಗರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಪಟಾಕಿ ಗೋಡೌನ್ 2020ರಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಅವಘಡದಲ್ಲಿ ಸಮೀಪದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಅಮಾಯಕ ಪಾದಚಾರಿಗಳು ಸಹ ಪ್ರಾಣ ಕಳೆದುಕೊಂಡಿರುವುದು ದುರಂತ. ಘಟನೆಗೆ ಕೃಷ್ಣಗಿರಿಯ ಜನತೆ ಶೋಕ ವ್ಯಕ್ತಪಡಿಸಿದ್ದಾರೆ. ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಇನ್ನು ಸ್ಫೋಟದ ನಿಖರವಾದ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ಕೃಷ್ಣಗಿರಿ ಪೊಲೀಸ್ ವರಿಷ್ಠಾಧಿಕಾರಿ ಸರೋಜ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪರಿಹಾರ ಘೋಷಿಸಿದ ಪ್ರಧಾನಿ ಮೋದಿ: ಅವಘಡದಲ್ಲಿ ಸಂಭವಿಸಿದ ಜೀವಹಾನಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. "ತಮಿಳುನಾಡಿನ ಕೃಷ್ಣಗಿರಿಯ ಪಟಾಕಿಗೋದಾಮಿನಲ್ಲಿ ಸಂಭವಿಸಿದ ದುರಂತದಿಂದ ಅಮೂಲ್ಯವಾದ ಜೀವಹಾನಿಯಾಗಿದ್ದು, ತೀವ್ರ ದುಃಖವಾಗಿದೆ. ಈ ಅತ್ಯಂತ ಕಷ್ಟಕರ ಸಮಯದಲ್ಲಿ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬಗಳೊಂದಿಗೆ ಇವೆ" ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ತಮಿಳುನಾಡಿಗೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಈ ದುರ್ಘಟನೆಯಲ್ಲಿ ಅಮೂಲ್ಯವಾದ ಜೀವಗಳನ್ನು ಕಳೆದುಕೊಂಡಿರುವುದರಿಂದ ತೀವ್ರ ದುಃಖವಾಗಿದೆ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹೇಳಿದ್ದಾರೆ. "ನನ್ನ ಪ್ರಾರ್ಥನೆಗಳು ಮತ್ತು ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ರಾಜ್ಯಪಾಲರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಸಂತಾಪ ವ್ಯಕ್ತಪಡಿಸಿದ ಸಿಎಂ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮೃತರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಾಯಾಳುಗಳಿಗೆ ಹಾಗೂ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ ₹ 1 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾಗಿರುವವರಿಗೆ ತಲಾ ₹ 50,000 ಪರಿಹಾರ ನೀಡುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಹಾರವನ್ನು ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಲಾಗುವುದು. ಪರಿಹಾರ ಕ್ರಮಗಳ ಮೇಲ್ವಿಚಾರಣೆಗಾಗಿ ತಮಿಳುನಾಡು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಆರ್.ಸಕ್ಕರಪಾಣಿ ಅವರನ್ನು ಸ್ಥಳಕ್ಕೆ ಕಳುಹಿಸಿರುವುದಾಗಿ ಸ್ಟಾಲಿನ್ ಹೇಳಿದರು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ವಿಶೇಷ ಕಾಳಜಿ ವಹಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಭೀಕರ ಸ್ಫೋಟ: 9 ಮಂದಿ ದುರ್ಮರಣ, ಪರಿಹಾರ ಘೋಷಿಸಿದ ಸಿಎಂ