ಶ್ರೀನಗರ : ಸ್ವಾತಂತ್ರ್ಯ ದಿನಾಚರಣೆಯಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಂಡಿಲ್ಲ ಹಾಗೂ ಯಾವುದೇ ನಿರ್ಬಂಧವಿಲ್ಲ. ಮೂರು ವರ್ಷಗಳಲ್ಲಿ ಇಲ್ಲಿ ಸ್ವಾತಂತ್ರ್ಯ ದಿನದಂದು ಇಂಟರ್ನೆಟ್ ಸೇವೆ ಸ್ಥಗಿತಗೊಳ್ಳದಿರುವುದು ಇದೇ ಮೊದಲು ಎಂದು ಐಜಿಪಿ ವಿಜಯ್ ಕುಮಾರ್ ಹೇಳಿದ್ರು.
ಸ್ವಾತಂತ್ರ್ಯ ದಿನದ ಹಿಂದಿನ ದಿನವೂ ಅಂತರ್ಜಾಲ ಬಳಕೆಗೆ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಕೌಂಟರ್-ಡ್ರೋನ್ ಟೆಕ್ನಾಲಜಿ ಅಳವಡಿಸಿಕೊಳ್ಳಲಾಗಿದೆ ಎಂದು ಐಜಿಪಿಯನ್ನು ಉಲ್ಲೇಖಿಸಿ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
![internet](https://etvbharatimages.akamaized.net/etvbharat/prod-images/12780167_zx.jpg)
2019ರಲ್ಲಿ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿತು. ಅಂದಿನಿಂದ ಇಲ್ಲಿ ಇಂಟರ್ನೆಟ್ ಸೇವೆಗಳಿಗೆ ಸಾಕಷ್ಟು ನಿರ್ಬಂಧಗಳನ್ನು ಹೇರಲಾಗುತ್ತಿದೆ.
ಇನ್ನು, ಭಾರತ ಸ್ವಾತಂತ್ರ್ಯ ದಿನದಂದು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸದೇ ಇರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೆಲವರು ಬರೆದಿದ್ದಾರೆ. 2003ರಿಂದ ಕಾಶ್ಮೀರದಲ್ಲಿ ಎಲ್ಲಾ ಫೋನ್‌ಗಳು, ಎಸ್‌ಎಂಎಸ್‌ಗಳು ಮತ್ತು ಇಂಟರ್ನೆಟ್ ಸೇವೆಗಳು ಪೂರ್ಣ ವೇಗದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲು ಎಂದು ನೆಟಿಜನ್ಸ್ ಹೇಳಿದ್ದಾರೆ.
2003ರ ಬಳಿಕ ಆಗಸ್ಟ್ 15ರ ಭಾರತ ಸ್ವಾತಂತ್ರ್ಯ ದಿನದಂದು ಕಾಶ್ಮೀರದಲ್ಲಿ ಮೊದಲ ಬಾರಿಗೆ ಎಲ್ಲಾ ಫೋನ್, ಎಸ್‌ಎಂಎಸ್ ಮತ್ತು ಇಂಟರ್ನೆಟ್ ಸೇವೆಗಳು ಪೂರ್ಣ ವೇಗದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಟ್ವಿಟರ್ ಬಳಕೆದಾರರು ಬರೆದುಕೊಂಡಿದ್ದಾರೆ.
ಕಣಿವೆಯ ನಿವಾಸಿ ಎಂದು ಹೇಳಿಕೊಂಡ ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು, Day to India from proud NayaKashmir!! ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಕಳೆದ 2 ದಶಕಗಳಲ್ಲಿ ಇದೇ ಮೊದಲ ಬಾರಿಗೆ, ಇಂದು ಸ್ವಾತಂತ್ರ್ಯ ದಿನದಂದು ಇಂಟರ್ನೆಟ್ ಸೇರಿ ಯಾವುದೇ ನಿರ್ಬಂಧಗಳಿಲ್ಲ ಎಂದು ಬರೆದುಕೊಂಡಿದ್ದಾರೆ. ಇದು ಹೊಸ ಕಾಶ್ಮೀರ, ಉಜ್ವಲ ಮತ್ತು ಶಾಂತಿಯುತ ಭವಿಷ್ಯಕ್ಕಾಗಿ ಮುಂದುವರಿಯುತ್ತಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.