ತಿರುವನಂತಪುರ: ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಧನದ ಸ್ಮರಣಾರ್ಥ ಕಾಂಗ್ರೆಸ್ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭಾಷಣದ ವೇಳೆ ಮೈಕ್ ಕೆಟ್ಟು ನಿಂತ ಘಟನೆಯಲ್ಲಿ ಆಪರೇಟರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಸದ್ಯ ಹೆಚ್ಚು ಚರ್ಚೆಯಲ್ಲಿದೆ. ಜುಲೈ 24ರಂದು ತಿರುವನಂತಪುರಂನಲ್ಲಿರುವ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ವಿವಾದಾತ್ಮಕ ಘಟನೆ ನಡೆದಿತ್ತು. ವಟ್ಯೂರ್ಕಾವು ತೊಪ್ಪುಮುಕ್ ಕಲ್ಲುಮಲ ರಸ್ತೆಯಲ್ಲಿರುವ ಎಸ್ ವಿ ಸೌಂಡ್ಸ್ ಮಾಲೀಕ ರಂಜಿತ್ ವಿರುದ್ಧ ತಿರುವನಂತಪುರ ಕಂಟೋನ್ಮೆಂಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಉಮ್ಮನ್ ಚಾಂಡಿ ಸ್ಮರಣಾರ್ಥ ಸಭೆಯಲ್ಲಿ ವಿಜಯನ್ ಅವರು ಭಾಗವಹಿಸುವ ಬಗ್ಗೆ ರಾಜಕೀಯ ಗದ್ದಲದ ನಡುವೆಯೂ ಪೊಲೀಸರ ಅಸಾಮಾನ್ಯ ನಡೆ ಹೆಚ್ಚು ವಿವಾದಾತ್ಮಕವಾಗಿದೆ. ವಿಷಯ ಹೆಚ್ಚು ವಿವಾದಕ್ಕೆ ಒಳಗಾಗುತ್ತಿರುವಾಗಲೇ ಮುಖ್ಯಮಂತ್ರಿ ಕಚೇರಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡ ಒಂದು ದಿನದ ನಂತರ ಸಿಎಂ ಪಿಣರಾಯಿ ಈ ಬಗ್ಗೆ ಹೇಳಿಕೆ ನೀಡಿದ್ದು, ಪ್ರಕರಣವನ್ನು ಮುಂದುವರಿಸಬೇಡಿ. ಭದ್ರತಾ ಲೋಪವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಭದ್ರತಾ ತಪಾಸಣೆ ನಡೆಸಿದ ನಂತರ ಉಪಕರಣಗಳನ್ನು ಹಿಂತಿರುಗಿಸುವಂತೆ ಮುಖ್ಯಮಂತ್ರಿ ಪೊಲೀಸರಿಗೆ ಸೂಚಿಸಿದ್ದಾರೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಈ ಸಭೆಯನ್ನು ಆಯೋಜಿಸಿತ್ತು. ಮುಖ್ಯಮಂತ್ರಿಯನ್ನು ಸಮಾರಂಭಕ್ಕೆ ಆಹ್ವಾನಿಸಿದಾಗಿನಿಂದಲೇ ಕಾಂಗ್ರೆಸ್‌ನಲ್ಲಿ ವಿವಾದಗಳು ಭುಗಿಲೆದ್ದಿತ್ತು. ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಹ್ವಾನಿಸಲು ಕಾಂಗ್ರೆಸ್ ರಾಜ್ಯ ನಾಯಕತ್ವ ನಿರ್ಧರಿಸಿದ್ದರೆ, ಪಕ್ಷದ ಒಂದು ವರ್ಗ ಪಿಣರಾಯಿ ನೇತೃತ್ವದ ಸಿಪಿಎಂ ಸರ್ಕಾರ, ಮಹಿಳೆಯೊಬ್ಬರು ಮಾಡಿದ ಲೈಂಗಿಕ ಆರೋಪ ಹಾಗೂ ವಂಚನೆ ಪ್ರಕರಣಗಳ ಬಗ್ಗೆ ತನಿಖೆ ಆರಂಭಿಸುವ ಮೂಲಕ ಚಾಂಡಿ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿತ್ತು ಎಂದು ಆರೋಪಿಸಿ ಪಕ್ಷದ ಒಂದು ವರ್ಗ ಅಸಮಾಧಾನ ಹೊರ ಹಾಕಿತ್ತು.
ಸೋಮವಾರ ನಡೆದ ಸ್ಮರಣಾರ್ಥ ಸಭೆಗೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಜಯನ್ ಅವರು ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಮೈಕ್ ಕೆಲವು ಸೆಕೆಂಡುಗಳ ಕಾಲ ಹೌಲಿಂಗ್/ಹಿಸ್ಸಿಂಗ್ ಶಬ್ದವನ್ನು ಉಂಟುಮಾಡಿತ್ತು. ಗಾಳಿ ಹೆಚ್ಚಾದಾಗ ಸಾಮಾನ್ಯವಾಗಿ ಈ ರೀತಿಯ ಶಬ್ದ ಬರುತ್ತದೆ. ಆದರೆ, ಪೊಲೀಸರು ಮಾತ್ರ ಸಾರ್ವಜನಿಕ ಸುವ್ಯವಸ್ಥೆ ಅಥವಾ ಅಪಾಯದ ಗಂಭೀರ ಉಲ್ಲಂಘನೆಗಾಗಿ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್‌ಗಳನ್ನು ಹಾಕಿ ಎಫ್‌ಐಆರ್ ದಾಖಲಿಸಿದ್ದರು.
ಸೌಂಡ್ ಸಿಸ್ಟಂ ಉಸ್ತುವಾರಿ ರಂಜಿತ್ ಮಾತನಾಡಿ, ಘಟನೆ ಉದ್ದೇಶಪೂರ್ವಕವಾಗಿ ನಡೆದಿಲ್ಲ, ಮುಖ್ಯಮಂತ್ರಿ ಮಾತನಾಡುವ ವೇಳೆ ನೂಕುನುಗ್ಗಲು ಉಂಟಾಗಿ ಕೇಬಲ್ ತುಂಡಾಯಿತು. ಮುಖ್ಯಮಂತ್ರಿ ಮಾತನಾಡಲು ಆಗಮಿಸಿದಾಗ ಪತ್ರಕರ್ತರು, ಛಾಯಾಗ್ರಾಹಕರು ಜಮಾಯಿಸಿದರು. ರಭಸದಲ್ಲಿ ಜನರ ಕಾಲಿಗೆ ಕೇಬಲ್ ಸಿಕ್ಕು ಸೌಂಡ್ ಬಾಕ್ಸ್ ಬಿದ್ದಿದೆ. ಅಷ್ಟರಲ್ಲಿ ಒಬ್ಬ ಫೋಟೋಗ್ರಾಫರ್ ಬ್ಯಾಗ್ ಕನ್ಸೋಲ್ ಮೇಲೆ ಬಿದ್ದಿತ್ತು. ಇದೇ ಸ್ಥಗಿತಕ್ಕೆ ಕಾರಣ. ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಅನಿರೀಕ್ಷಿತವಾಗಿ ಜನಜಂಗುಳಿ ಇತ್ತು. ಇಂತಹ ಜನಜಂಗುಳಿ ಕಾರ್ಯಕ್ರಮಗಳಲ್ಲಿ ಹಗ್ಗ ಕಟ್ಟಿ ಹಿಂತಿರುಗಲು ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ಸ್ಥಳಕ್ಕೆ ಧಾವಿಸಿದ್ದೇ ಅಡ್ಡಿಯಾಗಲು ಕಾರಣ ಎಂದು ರಂಜಿತ್ ವಿವರಿಸಿದರು
ಸಾಮಾನ್ಯ ತಾಂತ್ರಿಕ ಪ್ರಕ್ರಿಯೆಯ ಭಾಗವಾಗಿ ಪ್ರಕರಣ ದಾಖಲಿಸಲಾಗಿದೆ. ವಿಐಪಿ ಕಾರ್ಯಗಳಲ್ಲಿ ಇದು ಅಸಾಮಾನ್ಯವಾಗಿದೆ. ಸಾಮಾನ್ಯವಾಗಿ ಪಿಡಬ್ಲ್ಯೂಡಿ ಎಲೆಕ್ಟ್ರಿಕಲ್ ವಿಭಾಗವು ಸಿಎಂ ಕಾರ್ಯಚಟುವಟಿಕೆಗೆ ಮೊದಲು ಮೈಕ್ ಅನ್ನು ಪರಿಶೀಲಿಸುತ್ತದೆ. ಇಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿದೆಯೇ ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ. ವೈಜ್ಞಾನಿಕ ಪರೀಕ್ಷೆಯ ನಂತರ ಉಪಕರಣಗಳನ್ನು ಆಪರೇಟರ್‌ಗೆ ಹಿಂತಿರುಗಿಸಲಾಗುತ್ತದೆ ಎಂದು ತಿರುವನಂತಪುರ ಡಿಸಿಪಿ ವಿ.ಅಜಿತ್ ತಿಳಿಸಿದ್ದಾರೆ.
ಇದನ್ನೂ ಓದಿ: G.Parameshwar: ಸತ್ಯಾಂಶ ನೋಡಿ ಕಾನೂನಾತ್ಮಕ ಅವಕಾಶಗಳಿದ್ದರೆ ಕೇಸ್ ವಾಪಸ್: ಜಿ.ಪರಮೇಶ್ವರ್