ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಸಂಯುಕ್ತ ಕಿಸಾನ್ ಮೋರ್ಚಾದ 40 ರೈತ ಸಂಘಟನೆಗಳು ಅಕ್ಟೋಬರ್ 18 ರಂದು ದೇಶಾದ್ಯಂತ ರೈಲು ತಡೆಗೆ ಕರೆ ನೀಡಿವೆ. ಅಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ಪ್ರತಿಭಟನೆ ನಡೆಸುವುದಾಗಿ ಹೇಳಿದೆ.
ಅಲ್ಲದೇ, ರೈತ ಸಂಘವು ಅಕ್ಟೋಬರ್ 12 ರಂದು ದೇಶಾದ್ಯಂತ 'ಶಹೀದ್ ಕಿಸಾನ್ ದಿವಸ್' ಎಂದು ಘೋಷಿಸಿದೆ. ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಅಂದು ಎಲ್ಲರೂ ತಮ್ಮ ಮನೆಯ ಹೊರಗಡೆ 5 ಮೆಣದಬತ್ತಿಗಳನ್ನು ಬೆಳಗಿಸಬೇಕೆಂದು ಎಸ್‌ಕೆಎಂ ಮನವಿ ಮಾಡಿದೆ.
ಸಚಿವರನ್ನ ಸಂಪುಟದಿಂದ ಕೈ ಬಿಡಿ
ಅ.18 ರಂದು ದೇಶಾದ್ಯಂತ ಶಾಂತಿಯುತ, ಸಾಮೂಹಿಕ ಚಳವಳಿ ಮಾಡಲಾಗುತ್ತದೆ. ಯುಪಿ ಸರ್ಕಾರದ ನೀರಸ ಧೋರಣೆಯನ್ನು ಖಂಡಿಸಿ ಎರಡು ಬೇಡಿಕೆಗಳನ್ನು ಮಂಡಿಸಲಾಗಿದ್ದು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು. ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಟೆನಿ ಹಾಗೂ ಆತನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿ ಸುಮಿತ್ ಜೈಸ್ವಾಲ್, ಅಂಕಿತ್ ದಾಸ್‌ನನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಅಕ್ಟೋಬರ್ 11 ರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಮತ್ತಷ್ಟು ತೀವ್ರಗೊಳಿಸುವ ಒಕ್ಕೂಟ ಬೆದರಿಕೆ ಹಾಕಿದೆ.
ರೈತರ ಅಸ್ಥಿಯೊಂದಿಗೆ ಯಾತ್ರೆ ಆರಂಭ... ಗೌರವ ಸಲ್ಲಿಕೆ
ಲಖಿಂಪುರ್ ಖೇರಿಯಲ್ಲಿ ಜೀವ ಕಳೆದುಕೊಂಡ ರೈತರಿಗೆ ಗೌರವ ಸಲ್ಲಿಸುವಂತೆ ದೇಶದಾದ್ಯಂತದ ರೈತರನ್ನು ಒತ್ತಾಯಿಸಿರುವ ಎಸ್‌ಕೆಎಂ, ಶಹೀದ್ ಕಿಸಾನ್ ಯಾತ್ರೆಯಲ್ಲಿ ಮೃತರ ರೈತರ ಅಸ್ಥಿಯೊಂದಿಗೆ ಆರಂಭವಾಗುತ್ತದೆ. ಈ ಯಾತ್ರೆ ಯುಪಿ ರಾಜ್ಯಾದ್ಯಂತ ನಡೆಯಲಿದ್ದು, ಪ್ರತಿ ಜಿಲ್ಲೆಗೆ ಪ್ರತ್ಯೇಕ ಅಸ್ಥಿ ಕಲಶವನ್ನು ಕಳುಹಿಸಲಾಗುತ್ತದೆ. ಇದು ಆ ಜಿಲ್ಲೆಯ ಪವಿತ್ರ ಸ್ಥಳದಲ್ಲಿ ಮುಕ್ತಾಯಗೊಳ್ಳುತ್ತದೆ ಎಂದು ಹೇಳಿದೆ.
ಟೋಲ್ ಪ್ಲಾಜಾಗಳಲ್ಲಿ ಹುತಾತ್ಮರಿಗೆ ವಿಶೇಷ ಪ್ರಾರ್ಥನೆ
ಗುರುದ್ವಾರ, ದೇವಸ್ಥಾನ, ಮಸೀದಿ, ಚರ್ಚ್ ಅಥವಾ ಯಾವುದೇ ಸಾರ್ವಜನಿಕ ಸ್ಥಳ ಅಥವಾ ಟೋಲ್ ಪ್ಲಾಜಾಗಳಲ್ಲಿ ಹುತಾತ್ಮ ರೈತರಿಗೆ ವಿಶೇಷ ಪ್ರಾರ್ಥನಾ ಸಭೆಗಳನ್ನು ಅಥವಾ ಶ್ರದ್ಧಾಂಜಲಿ ಸಭೆಗಳನ್ನು ಆಯೋಜಿಸಲು ಒಕ್ಕೂಟವು ರೈತ ಸಂಘಟನೆಗಳನ್ನು ಒತ್ತಾಯಿಸಿದೆ. ಕ್ಯಾಂಡಲ್ ಮೆರವಣಿಗೆಗಳನ್ನು ಆ ದಿನ ಸಂಜೆ ಆಯೋಜಿಸಬೇಕೆಂತಲೂ ಮನವಿ ಮಾಡಿದೆ.