ಮುಂಬೈ (ಮಹಾರಾಷ್ಟ್ರ): ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗಲೇ ಮಹಾರಾಷ್ಟ್ರದ ವಿಧಾನ ಭವನದ ಮುಂದೆ ರೈತರೊಬ್ಬರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. ತಕ್ಷಣವೇ ಪೊಲೀಸರ ಮಧ್ಯಪ್ರವೇಶದಿಂದ ರೈತನ ಪ್ರಾಣ ಉಳಿದಿದೆ.
ಒಸ್ಮಾನಾಬಾದ್ ಜಿಲ್ಲೆಯ ತಾಂಡಲವಾಡಿ ಗ್ರಾಮದ ನಿವಾಸಿ, 55 ವರ್ಷದ ಸುಭಾಷ್ ಭಾನುದಾಸ್ ದೇಶಮುಖ್ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ರೈತ ಎಂದು ಗುರುತಿಸಲಾಗಿದೆ. ರಾಜಧಾನಿ ಮುಂಬೈನಲ್ಲಿರುವ ವಿಧಾನ ಭವನದಲ್ಲಿ ಕಳೆದ ನಾಲ್ಕು ದಿನಗಳ ಮುಂಗಾರು ಅಧಿವೇಶನ ನಡೆಯುತ್ತಿದೆ. ಆದರೆ, ಇಂದು ಮಧ್ಯಾಹ್ನ 12.30ರ ಸುಮಾರಿಗೆ ರೈತ ಸುಭಾಷ್ ಏಕಾಏಕಿ ವಿಧಾನಭವನದ ಹೊರಭಾಗದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದು ತಕ್ಷಣವೇ ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕೂಡಲೇ ಬೆಂಕಿ ನಂದಿಸಿದ ನಂತರ ರೈತ ಸುಭಾಷ್ರನ್ನು ಸಮೀಪದ ಜಿಟಿ ಆಸ್ಪತ್ರೆಗೆ ರವಾನಿಸಿದ್ದಾರೆ. ಶೇ.20ರಿಂದ 30ರಷ್ಟು ಸುಟ್ಟ ಗಾಯಗಳಾಗಿದ್ದು, ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಈ ಘಟನೆಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಿದ್ದೆಗಣ್ಣಲ್ಲಿದ್ದ ಪತ್ನಿಯನ್ನು ರೈಲು ಹಳಿ ಮೇಲೆ ತಳ್ಳಿ ಮಕ್ಕಳೊಂದಿಗೆ ಪರಾರಿಯಾದ ಪತಿ