ನವದೆಹಲಿ: ಕೇಂದ್ರ ಗೃಹ ಸಚಿವಾಲಯದ (ಎಂಎಚ್‌ಎ) ನಿರ್ದೇಶನದ ಮೇರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಮತ್ತು ಮುಂಬೈನ ಮಾಜಿ ಪೊಲೀಸ್ ಕಮೀಷನರ್ ಸಂಜಯ್ ಪಾಂಡೆ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸಿದೆ. 2009 ಮತ್ತು 2017 ರ ನಡುವೆ ಎನ್‌ಎಸ್‌ಇ ಉದ್ಯೋಗಿಗಳ ಫೋನ್ ಟ್ಯಾಪಿಂಗ್ ಮಾಡಿದ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿದೆ.
ಈ ಪ್ರಕರಣ ಕುರಿತಂತೆ ಕೇಂದ್ರೀಯ ತನಿಖಾ ದಳವು ಮುಂಬೈ, ಪುಣೆ ಮತ್ತು ದೇಶದ ಹಲವು ಭಾಗಗಳಲ್ಲಿ ದಾಳಿ ನಡೆಸುತ್ತಿದೆ. ಅಕ್ರಮ ಫೋನ್ ಕದ್ದಾಲಿಕೆ ಕಾಯ್ದೆಯಡಿ ಗೃಹ ಸಚಿವಾಲಯದ ಸೂಚನೆ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. 2009 ಮತ್ತು 2017ರಲ್ಲಿ ಎನ್‌ಎಸ್‌ಇ ಉದ್ಯೋಗಿಗಳ ಫೋನ್‌ಗಳನ್ನು ಚಿತ್ರಾ ರಾಮಕೃಷ್ಣ ಮತ್ತು ಪಾಂಡೆ ಅವರು ಅಕ್ರಮವಾಗಿ ಟ್ಯಾಪ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಜಯ್ ಪಾಂಡೆ ಐಸೆಕ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ನಡೆಸುತ್ತಿದ್ದರು. ಚಿತ್ರಾ ರಾಮಕೃಷ್ಣ ಅವರು ಎನ್‌ಎಸ್‌ಇ ಉದ್ಯೋಗಿಗಳ ಫೋನ್ ಟ್ಯಾಪ್ ಮಾಡಲು ಈ ಸಂಸ್ಥೆಯನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಎನ್‌ಎಸ್‌ಇ ಉದ್ಯೋಗಿಗಳು ಬೆಳಗ್ಗೆ 9 ರಿಂದ 10 ಗಂಟೆಯ ನಡುವೆ ಮಾಡಿದ ಫೋನ್ ಕರೆಗಳನ್ನು ಐಸೆಕ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಟ್ಯಾಪ್ ಮಾಡಿ ರೆಕಾರ್ಡ್ ಮಾಡಿದೆ. ಅಕ್ರಮವಾಗಿ ಫೋನ್ ಕರೆಗಳನ್ನು ಟ್ಯಾಪ್ ಮಾಡಲು ಪಾಂಡೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.