ಪುಣೆ (ಮಹಾರಾಷ್ಟ್ರ) : ಬೇಹುಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಡಿಆರ್ ಡಿಒ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರಿಗೆ ಪಾಲಿಗ್ರಾಫ್, ವಾಯ್ಸ್ ಲೇಯರ್ ಮತ್ತು ಮಾನಸಿಕ ವಿಶ್ಲೇಷಣೆ ಪರೀಕ್ಷೆಗಳನ್ನು ನಡೆಸಲು ಅನುಮತಿ ಕೋರಿದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮನವಿಯನ್ನು ಪುಣೆಯ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಪಾಲಿಗ್ರಾಫ್ ಪರೀಕ್ಷೆ, ಧ್ವನಿ ಪದರ ಮತ್ತು ಮನೋವೈಜ್ಞಾನಿಕ ವಿಶ್ಲೇಷಣೆ ಪರೀಕ್ಷೆಗೆ ಕುರುಲ್ಕರ್ ಅವರ ಒಪ್ಪಿಗೆ ಪಡೆಯುವಂತೆ ಕೋರಿ ಎಟಿಎಸ್ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ವಿ.ಆರ್. ಕಚ್ರೆ ಶನಿವಾರ ತಿರಸ್ಕರಿಸಿದ್ದಾರೆ.
ಪುಣೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯೊಂದಿಗೆ ಸಂಯೋಜಿತವಾಗಿರುವ ಪ್ರಯೋಗಾಲಯದ ಆಗಿನ ನಿರ್ದೇಶಕರಾಗಿದ್ದ ಕುರುಲ್ಕರ್ ಅವರನ್ನು ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತನಿಗೆ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಅಧಿಕೃತ ರಹಸ್ಯ ಕಾಯ್ದೆಯಡಿ ಮೇ 3 ರಂದು ಬಂಧಿಸಲಾಗಿತ್ತು.
ಈ ಪರೀಕ್ಷೆಗಳಿಗೆ ಒಳಗಾಗುವಂತೆ ಆರೋಪಿಗಳನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಆರೋಪಿ ಪರ ವಕೀಲ ರಿಷಿಕೇಶ್ ಗಣು ವಾದಿಸಿದರು ಮತ್ತು ಇಡೀ ಪ್ರಕರಣವು ಎಟಿಎಸ್ನಲ್ಲಿರುವ ಕೆಲ ದೂರವಾಣಿ ಸಂಭಾಷಣೆಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ಮಾಹಿತಿಯನ್ನು ಆಧರಿಸಿದೆ ಎಂದರು. ನ್ಯಾಯಾಧೀಶರು ತಮ್ಮ ಆದೇಶದಲ್ಲಿ, "... ಆರೋಪಿಯ ಒಪ್ಪಿಗೆಯಿಲ್ಲದೆ ಆತನನ್ನು ಪಾಲಿಗ್ರಾಫ್ ಪರೀಕ್ಷೆ ಅಥವಾ ಧ್ವನಿ ಪದರ ಮತ್ತು ಮಾನಸಿಕ ವಿಶ್ಲೇಷಣೆ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸಲಾಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ" ಎಂದು ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಲಯವು, ಕ್ರಿಮಿನಲ್ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ಅಥವಾ ಬೇರೆ ಯಾವುದೇ ರೀತಿಯ ತನಿಖೆಗಳಲ್ಲಿ ವ್ಯಕ್ತಿಯನ್ನು ಯಾವುದೇ ಪರೀಕ್ಷೆಗಳಿಗೆ ಬಲವಂತವಾಗಿ ಒಳಪಡಿಸಬಾರದು ಎಂಬುದು ಸ್ಪಷ್ಟವಾಗಿದೆ. ಹಾಗೆ ಮಾಡುವುದರಿಂದ ವೈಯಕ್ತಿಕ ಸ್ವಾತಂತ್ರ್ಯದ ಹರಣವಾಗುತ್ತದೆ ಎಂದು ಹೇಳಿದೆ.
ಕುರುಲ್ಕರ್ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಮಹಿಳೆಯೊಂದಿಗೆ ಆಕರ್ಷಿತರಾಗಿದ್ದರು ಮತ್ತು ಭಾರತೀಯ ಕ್ಷಿಪಣಿ ವ್ಯವಸ್ಥೆಗಳ ಬಗೆಗಿನ ರಹಸ್ಯ ಮಾಹಿತಿಯನ್ನು ಆ ಮಹಿಳೆಯೊಂದಿಗೆ ಚರ್ಚಿಸಿದ್ದಾರೆ ಎಂದು ಎಟಿಎಸ್ ಚಾರ್ಜ್ಶೀಟ್ನಲ್ಲಿ ಆರೋಪಿಸಲಾಗಿದೆ. ಎಟಿಎಸ್ ಪ್ರಕಾರ, ತನ್ನನ್ನು ತಾನು ಜಾರಾ ದಾಸಗುಪ್ತಾ ಎಂದು ಪರಿಚಯಿಸಿಕೊಂಡ ಪಾಕಿಸ್ತಾನಿ ಗೂಢಚಾರ ಮಹಿಳೆ ವಾಟ್ಸ್ಆ್ಯಪ್ ಮೂಲಕ ಕುರುಲ್ಕರ್ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದಳು. ತನ್ನನ್ನು ಯುಕೆ ಮೂಲದ ಸಾಫ್ಟವೇರ್ ಎಂಜಿನಿಯರ್ ಎಂದು ಪರಿಚಯಿಸಿಕೊಂಡಿದ್ದಳು.
ನಂತರ ಹಲವಾರು ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ವಾಯ್ಸ್ ಕಾಲ್ಗಳು ಮತ್ತು ವೀಡಿಯೊ ಕಾಲ್ಗಳನ್ನು ಮಾಡುವ ಮೂಲಕ ಅವಳು ಕುರುಲ್ಕರ್ ಅವರನ್ನು ಆಕರ್ಷಿಸಿದ್ದಳು ಎಂದು ಆರೋಪಿಸಲಾಗಿದೆ. ಜೂನ್ 10, 2022 ಮತ್ತು ಫೆಬ್ರವರಿ 24, 2023 ರ ನಡುವೆ ಕುರುಲ್ಕರ್ ಮತ್ತು ಜಾರಾ ನಡುವೆ ಅನೇಕ ಸಂಭಾಷಣೆಗಳು ನಡೆದಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಎಟಿಎಸ್ ಜಾರಾ ಅವರನ್ನು ಸಹ ಆರೋಪಿ ಎಂದು ಹೆಸರಿಸಿದೆ.
ಇದನ್ನೂ ಓದಿ : ಜೆಮಿನಿ; ಗೂಗಲ್ನ ಹೊಸ ಎಐ ಚಾಟ್ಬಾಟ್.. ಏನೆಲ್ಲ ವೈಶಿಷ್ಟ್ಯತೆಗಳಿವೆ ಗೊತ್ತಾ?