ಹೊಸದಿಲ್ಲಿ: 'ಜನ ಗಣ ಮನ' ಮತ್ತು 'ವಂದೇ ಮಾತರಂ' ಎರಡೂ ಸಮಾನ ಸ್ಥಾನದಲ್ಲಿದ್ದು, ದೇಶದ ಪ್ರತಿಯೊಬ್ಬ ಪ್ರಜೆ ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ಕೇಂದ್ರ ಸರ್ಕಾರ ಶನಿವಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯ ನಡುವಿನ ಸಮಾನತೆಯ ಪರಿಶೀಲನೆಗಾಗಿ ಮತ್ತು ರಾಷ್ಟ್ರೀಯ ಗೀತೆ 'ವಂದೇ ಮಾತರಂ'ಗೆ ರಾಷ್ಟ್ರಗೀತೆಯ ಸಮನಾದ ಗೌರವ ಮತ್ತು ಸ್ಥಾನಮಾನವನ್ನು ನೀಡುವ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಮಯದಲ್ಲಿ (ಪಿಐಎಲ್) ಕೇಂದ್ರವು ಹೈಕೋರ್ಟ್‌ಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದೆ.
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಗೃಹ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ ಮತ್ತು ಇತರರಿಂದ ಪ್ರತಿಕ್ರಿಯೆ ಕೇಳಿತ್ತು. ಜನವರಿ 24, 1950 ರ ಸಂವಿಧಾನ ಸಭೆಯ ನಿರ್ಣಯದಂತೆ ಮತ್ತು ಮದ್ರಾಸ್ ಹೈಕೋರ್ಟ್ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನಂತೆ ಪ್ರತಿ ಕೆಲಸದ ದಿನದಂದು ಎಲ್ಲಾ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 'ಜನ-ಗಣ-ಮನ' ಮತ್ತು 'ವಂದೇ ಮಾತರಂ' ನುಡಿಸುವುದನ್ನು ಮತ್ತು ಹಾಡುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
ಅರ್ಜಿದಾರ ಮತ್ತು ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ, ಭಾರತವು ರಾಜ್ಯಗಳ ಒಕ್ಕೂಟವಾಗಿದೆಯೇ ಹೊರತು ಇದು ರಾಜ್ಯಗಳ ಸಂಘ ಅಥವಾ ರಾಜ್ಯಗಳ ಸಂಸ್ಥೆಯಲ್ಲ ಎಂದು ಹೇಳಿದರು. ನಮಗೆಲ್ಲರಿಗೂ ಒಂದೇ ಒಂದು ರಾಷ್ಟ್ರೀಯತೆ ಇದೆ. ಅದು ಭಾರತೀಯತೆ. ಹೀಗಾಗಿ 'ವಂದೇ ಮಾತರಂ' ಅನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ದೇಶವನ್ನು ಒಗ್ಗಟ್ಟಿನಲ್ಲಿಡಲು, ಜನಗಣಮನ ಮತ್ತು ವಂದೇ ಮಾತರಂ ಪ್ರಚಾರಕ್ಕೆ ರಾಷ್ಟ್ರೀಯ ನೀತಿಯನ್ನು ರೂಪಿಸುವುದು ಸರ್ಕಾರದ ಕರ್ತವ್ಯ. ಎರಡನ್ನೂ ಸಂವಿಧಾನ ನಿರ್ಮಾತೃಗಳೇ ನಿರ್ಧರಿಸಿರುವುದರಿಂದ ಇದರಲ್ಲಿ ಬೇರೆ ಯಾವುದೇ ಭಾವನೆಯನ್ನು ಹುಟ್ಟುಹಾಕಲು ಯಾವುದೇ ಕಾರಣವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಜನ ಗಣ ಮನದಲ್ಲಿ ವ್ಯಕ್ತಪಡಿಸಿದ ಭಾವನೆಗಳನ್ನು ರಾಜ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯಕ್ತಪಡಿಸಲಾಗಿದೆ. ಆದರೆ, ವಂದೇ ಮಾತರಂನಲ್ಲಿ ವ್ಯಕ್ತಪಡಿಸಿದ ಭಾವನೆಗಳು ರಾಷ್ಟ್ರದ ಸ್ವರೂಪ ಮತ್ತು ಶೈಲಿಯನ್ನು ಸೂಚಿಸುತ್ತವೆ ಮತ್ತು ಈ ಗೀತೆ ರಾಷ್ಟ್ರಗೀತೆಯಷ್ಟೇ ಗೌರವಕ್ಕೆ ಅರ್ಹವಾಗಿದೆ. ಕೆಲವೊಮ್ಮೆ, ವಂದೇ ಮಾತರಂ ಅನ್ನು ಅನುಮತಿಸದ ಸಂದರ್ಭಗಳಲ್ಲಿ ಹಾಡಲಾಗುತ್ತದೆ. ವಂದೇಮಾತರಂ ನುಡಿಸಿದಾಗ/ ಹಾಡಿದಾಗ ಗೌರವ ತೋರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ವಂದೇ ಮಾತರಂ ಹಾಡು ಕನ್ನಡದಲ್ಲಿ ಬಿಡುಗಡೆ