ರಿಷಿಕೇಶ/ಹರಿದ್ವಾರ : ರಾಮಝುಲಾದ ಸ್ವರ್ಗಾಶ್ರಮ ಪ್ರದೇಶದಲ್ಲಿ ಆನೆಗಳ ಕಾಟ ಅಧಿಕವಾಗಿದೆ. ಇದರಿಂದ ಮಾನವ-ವನ್ಯಜೀವಿ ಸಂಘರ್ಷದ ಭೀತಿ ಎದುರಾಗಿದೆ. ವಿಷಯ ಗಮನಕ್ಕೆ ಬಂದರೂ ಜನವಸತಿ ಪ್ರದೇಶದಲ್ಲಿ ಆನೆಗಳ ಓಡಾಟ ತಡೆಯುವಲ್ಲಿ ಅರಣ್ಯ ಇಲಾಖೆ ಸಫಲತೆ ಕಾಣುತ್ತಿಲ್ಲ. ಆನೆಯ ಭೀತಿಯಿಂದಾಗಿ ನೀಲಕಂಠ ಯಾತ್ರೆಗೆ ತೆರಳುವ ಸಾವಿರಾರು ಯಾತ್ರಾರ್ಥಿಗಳ ಪ್ರಾಣಕ್ಕೂ ಅಪಾಯ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮಹಾಶಿವರಾತ್ರಿಯ ನಿಮಿತ್ತ ಈ ದಿನ ಸಾವಿರಾರು ಭಕ್ತರು ನೀಲಕಂಠ ಮಹಾದೇವ ದೇವಸ್ಥಾನಕ್ಕೆ ಕಣ್ವರ ಸಮೇತ ಜಲಾಭಿಷೇಕಕ್ಕೆ ಆಗಮಿಸುತ್ತಾರೆ. ಈ ವೇಳೆ ಆನೆ ಫುಟ್ಪಾತ್ ಮೇಲೆ ಸಂಚರಿಸುತ್ತದೆಯೇ? ಎಂಬುದರ ಮೇಲೆ ಕಣ್ಣಿಡಲಾಗಿದೆ.
ಸ್ವರ್ಗಾಶ್ರಮ ಪ್ರದೇಶದ ಬಾಬಾ ಕಾಳಿ ಕಮಲಿ ವಾಲೆ ಮಹಾರಾಜರ ಗದ್ದುಗೆಯ ಮೂಲಕ ಆನೆಯೊಂದು ಜನವಸತಿ ಪ್ರದೇಶವನ್ನು ತಲುಪಿದೆ. ಜನವಸತಿ ಪ್ರದೇಶದಲ್ಲಿ ಆನೆಗಳ ಕಾಟ ಹೆಚ್ಚಿರುವುದು ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿದೆ.
ಆನೆ ಕಾಟಕ್ಕೆ ಬೇಸತ್ತ ಜನ ತಟ್ಟೆ ಬಡಿಯುವ ಮೂಲಕ ಆನೆಯನ್ನು ಕಾಡಿನ ಕಡೆಗೆ ಓಡಿಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಆನೆ ಓಡಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಕುರಿತು ನಗರ ಪಂಚಾಯತ್ ಅಧ್ಯಕ್ಷ ಮಾಧವ್ ಅಗರ್ವಾಲ್ ಅವರು ಮಾತನಾಡಿ, ಈ ರೀತಿ ಆನೆಗಳು ಜನವಸತಿ ಪ್ರದೇಶಕ್ಕೆ ಬರುವುದರಿಂದ ಜನರ ಜೀವಕ್ಕೆ ಅಪಾಯವಾಗಿದೆ ಎಂದು ಹೇಳಿದ್ದಾರೆ.
ಸದ್ಯದಲ್ಲೇ ನೀಲಕಂಠ ಜಾತ್ರೆಯೂ ನಡೆಯಲಿದ್ದು, ಈ ವೇಳೆ ಆನೆ ಜನವಸತಿ ಪ್ರದೇಶಕ್ಕೆ ನುಗ್ಗದಂತೆ ಅರಣ್ಯ ಇಲಾಖೆ ಆದಷ್ಟು ಬೇಗ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಭಕ್ತರ ಜೀವಕ್ಕೆ ಅಪಾಯವಾಗಬಹುದು ಎಂದು ಎಚ್ಚರಿಸಿದ್ದಾರೆ.
ಹರಿದ್ವಾರದಲ್ಲೂ ಬಂದ ಆನೆ : ಹರಿದ್ವಾರದ ರೈಲು ನಿಲ್ದಾಣಕ್ಕೆ ಆನೆಯೊಂದು ಬಂದಿಳಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲ್ವೆ ನಿಲ್ದಾಣದ ಬಳಿ ಈ ಹಿಂದೆ ಹಲವು ಬಾರಿ ಗಜರಾಜ ಕಾಣಿಸಿಕೊಂಡಿದ್ದಾನೆ. ಈ ಮೊದಲು ಇತರ ಪ್ರದೇಶಗಳಲ್ಲೂ ಆನೆಗಳ ಓಡಾಟ ಕಂಡು ಬಂದಿದೆ. ಹರಿದ್ವಾರದ ಹೆಚ್ಚಿನ ಭಾಗವು ರಾಜಾಜಿ ಟೈಗರ್ ರಿಸರ್ವ್ ಪಾರ್ಕ್‌ನ ಗಡಿಯಾಗಿರುವುದರಿಂದ ಕಾಡು ಪ್ರಾಣಿಗಳು ಪ್ರತಿದಿನ ವಸತಿ ಪ್ರದೇಶಗಳಿಗೆ ಬರುತ್ತವೆ.
ಓದಿ: ಮಧ್ಯಪ್ರದೇಶದಲ್ಲಿ ಎರಡು ಪ್ರತ್ಯೇಕ ಅಪಘಾತ : ಮೂವರು ವಿದ್ಯಾರ್ಥಿಗಳು ಸೇರಿ ಐವರ ದುರ್ಮರಣ