ಪಾಟ್ನಾ: ಇಡಿ ಮತ್ತು ಸಿಬಿಐಗಳಿಗೆ ತಾವು ಹೆದರುವ ಮಾತೇ ಇಲ್ಲ, ಅವರ ಮನಸಿಗೆ ಶಾಂತಿ ಸಿಗುವ ಹಾಗಿದ್ದರೆ ಅವೆರಡೂ ಸಂಸ್ಥೆಗಳಿಗೆ ತನ್ನ ಮನೆಯಲ್ಲಿಯೇ ಕಚೇರಿ ಮಾಡಿಕೊಳ್ಳಲು ಜಾಗ ನೀಡುತ್ತೇನೆ ಎಂದು ಬಿಹಾರ್ ಉಪ ಮುಖ್ಯಮಂತ್ರಿ ತೇಜಶ್ವಿ ಪ್ರಸಾದ ಯಾದವ್ ಹೇಳಿದ್ದಾರೆ. ತನ್ನ ತಾಯಿ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕುಹಕವಾಡಿದರು.
"ಇಷ್ಟಾದರೂ ಅವರಿಗೆ ಶಾಂತಿ ಸಿಗದಿದ್ದರೆ ನಾನೇನೂ ಮಾಡಲಾರೆ" ಎಂದರು. ಈ ಹಿಂದೆಯೂ ಬಿಹಾರ ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ತನಿಖಾ ಸಂಸ್ಥೆಗಳಿಗೆ ಎಂದು ಹೆದರಿಲ್ಲ. ಬಿಹಾರ ರಾಜ್ಯದ ಒಳಿತಿಗಾಗಿ ಕೇಂದ್ರದೊಂದಿಗೆ ಹೋರಾಟ ನಡೆಸುವುದಾಗಿ ಅವರು ಹೇಳಿದರು.
ಆರ್ಜೆಡಿ ಮುಖಂಡ ತೇಜಶ್ವಿ ಪ್ರಸಾದ ಯಾದವ ಈ ಮುನ್ನ 2015 ರಿಂದ 2017 ರ ಅವಧಿಯಲ್ಲಿ ಬಿಹಾರ ಉಪಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
"ಅಂದಿನಿಂದ ಇಂದಿನವರೆಗೆ ನಾನು ಸಾಕಷ್ಟು ಪ್ರಬುದ್ಧನಾಗಿದ್ದೇನೆ. ತಂದೆಯ ಅನುಪಸ್ಥಿತಿಯಲ್ಲಿ ಪ್ರತಿಪಕ್ಷದ ನಾಯಕನಾಗಿ ಮತ್ತು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ ಅನುಭವ ನನಗಿದೆ." ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಸುಪುತ್ರ ತೇಜಶ್ವಿ ತಿಳಿಸಿದ್ದಾರೆ.
"ನನ್ನ ವಿರುದ್ಧ ದಾಖಲಾಗಿರುವ ಪ್ರಕರಣವು ನಾನು ಚಿಕ್ಕವನಿದ್ದಾಗಿನ ಪ್ರಕರಣವಾಗಿದೆ. ನನ್ನ ಕ್ರಿಕೆಟ್ ಜೀವನದ ಸಮಯದಲ್ಲಿ ಅದು ದಾಖಲಾಗಿದೆ. ಆದರೆ ನಾನು ಅಪರಾಧ ಮಾಡಿದ್ದೇ ಸತ್ಯವಾಗಿದ್ದರೆ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ" ಎಂದು ಅವರು ಪ್ರಶ್ನಿಸಿದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೇಜಶ್ವಿ ಯಾದವ್ ಆರೋಪಿಯಾಗಿದ್ದಾರೆ.