ನವದೆಹಲಿ: ಉತ್ತರಖಂಡದಲ್ಲಿ ಹಿಮ ಪ್ರವಾಹ ಸಂಭವಿಸಿದ ಕಹಿ ಘಟನೆ ಮರೆಯುವ ಮೊದಲೇ ಉತ್ತರ ಭಾರತದ ಹಲವೆಡೆ ಭೂಕಂಪನವಾಗಿದೆ. ಆತಂಕದಿಂದ ಜನರು ಮನೆಯಿಂದ ಹೊರಬಂದಿದ್ದಾರೆ.
ದೆಹಲಿ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಕಂಪಿಸಿದ್ದು, ರಿಕ್ಟರ್ ಮಾಪನದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ಮೂಲ ಕೇಂದ್ರಬಿಂದು ಪಂಜಾಬ್‌ನ ಅಮೃತಸರವಾಗಿದ್ದು, ದೆಹಲಿ, ಕಾಶ್ಮೀರ ಕಣಿವೆ, ಪಂಜಾಬ್ ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಭೂಮಿ ಕಂಪಿಸಿದೆ.
ದೆಹಲಿ ಸುತ್ತಮುತ್ತಲಿನ ರಾಜ್ಯಗಳಲ್ಲಿ ಭೂಕಂಪನದ ಅನುಭವವಾಗಿದೆ. ಜಮ್ಮು ಕಾಶ್ಮೀರದಲ್ಲಿ ಕೂಡ ಪ್ರಬಲ ಭೂಕಂಪನವಾಗಿದೆ. ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಭೂಕಂಪನ ಸಂಭವಿಸುತ್ತಿದ್ದಂತೆ ಸೀಲಿಂಗ್ ಫ್ಯಾನ್ ಅಲುಗಾಡುತ್ತಿತ್ತು.
ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, 6.3 ತೀವ್ರತೆಯ ಭೂಕಂಪದ ಕೇಂದ್ರಬಿಂದು ತಜಕಿಸ್ತಾನ ಎಂದು ಹೇಳಿದೆ.
ರಾತ್ರಿ 10: 30ರ ಸುಮಾರಿಗೆ ಭೂಮಿಯು ಬಲವಾಗಿ ನಡುಗಿದ್ದರ ಅನುಭವವಾಯಿತು. ನನ್ನ ನೆರೆಹೊರೆಯಲ್ಲಿ ಇರುವ ಕೆಲವರು ತಮ್ಮ ಮನೆಗಳಿಂದ ಹೊರಬರುತ್ತಿರುವುದನ್ನು ನೋಡಿದಾಗ, ಅದು ಭೂಕಂಪ ಎಂಬುದು ನನಗೆ ಅರಿವಾಯಿತು ಎಂದು ದೆಹಲಿಯ ರಾಜಿಂದರ್ ನಗರ ಪ್ರದೇಶದ ಅಂಗಡಿ ವರ್ತಕ ಹೇಳಿದರು.
ಪಂಜಾಬ್ ರಾಜ್ಯದಲ್ಲಿ ನಡುಕ ಉಂಟಾಗಿ ಜನರು ಅಮೃತಸರದ ಮನೆಗಳಿಂದ ಆತಂಕದಿಂದ ಹೊರಬಂದರು. ಭೂಮಿಯ ನಡುಕ ಬಹಳ ಪ್ರಬಲ ಬಲವಾಗಿತ್ತು ಎಂದು ಪವನ್ ನಗರದ ಸ್ಥಳೀಯರೊಬ್ಬರು ಹೇಳಿದ್ದಾರೆ.