ಪಾಟ್ನಾ(ಬಿಹಾರ್): ಸ್ತ್ರೀ ರೋಗ ತಜ್ಞರು ಪುರುಷನಾಗಿದ್ದರೆ, ಅವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಯುಷ್ಮಾನ್ ಖುರಾನಾ ಅವರ 'ಡಾಕ್ಟರ್ ಜಿ' ಚಿತ್ರವು ಈ ವಿಷಯವನ್ನು ತಮಾಷೆಯ ರೀತಿಯಲ್ಲಿ ತಂದಿದೆ. ಆದರೆ ನಿಜವಾದ ಪರಿಸ್ಥಿತಿ ಏನು?, ಇವರು ಮಹಿಳೆಯರ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಾಗ ಎಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ? ಎಂಬುದರ ಬಗ್ಗೆ 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಡಾ. ಹಿಮಾಂಶು ರೈ ಮಾತನಾಡಿದ್ದಾರೆ.
ಡಾ. ಹಿಮಾಂಶು ರೈ ಕಳೆದ 25 ವರ್ಷಗಳಿಂದ ಸ್ತ್ರೀ ರೋಗ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ತಂದೆ ಡಾ. ಶಾಂತಿ ರೈ ಕೂಡ ಸ್ತ್ರೀ ರೋಗ ತಜ್ಞರಾಗಿದ್ದು, ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.
ಸ್ತ್ರೀರೋಗ ತಜ್ಞರಾಗಿ ಎದುರಿಸಬೇಕಾದ ಸವಾಲುಗಳೇನು?: ಈ ಪ್ರಶ್ನೆಗೆ ಉತ್ತರಿಸಿದ ಡಾ. ರೈ, ಆರಂಭದಲ್ಲಿ ಸಮಸ್ಯೆ ಇದೆ. ಏಕೆಂದರೆ ಮಹಿಳೆಯರು ಇಂತಹ ಸಮಸ್ಯೆಗಳೊಂದಿಗೆ ಮಹಿಳಾ ವೈದ್ಯರ ಬಳಿಗೆ ಹೋಗಲು ಬಯಸುತ್ತಾರೆ. ಪುರುಷ ವೈದ್ಯರೊಂದಿಗೆ ಅಂತಹ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಲು ಹಿಂಜರಿಯುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಸ್ತ್ರೀಯರ ಬಗ್ಗೆ ಮಹಿಳೆಯರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ ಎಂದಲ್ಲ. ಒಬ್ಬ ವೈದ್ಯನಿಗೆ ಗಂಡು ಹೆಣ್ಣೆಂಬ ಭೇದವಿಲ್ಲ. ವರದಿಗಾರನನ್ನು ಹೇಗೆ ವರದಿಗಾರನಾಗಿ ಮಾತ್ರ ನೋಡಲಾಗುತ್ತದೋ ಹಾಗೇ ಅವರ ಲಿಂಗಕ್ಕೂ ಅವರ ವೃತ್ತಿಗೂ ಯಾವುದೇ ಸಂಬಂಧವಿಲ್ಲ ಎಂದರು.
ಕೆಲವು ಮಾರ್ಗಸೂಚಿ ಅಗತ್ಯ: ಪುರುಷ ವೈದ್ಯರು ಸ್ತ್ರೀ ರೋಗ ತಜ್ಞರಾಗಿ ಕೆಲಸ ಮಾಡುತ್ತಿದ್ದರೆ, ಮಹಿಳೆಯರನ್ನು ಪರೀಕ್ಷಿಸುವಾಗ ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಅವುಗಳೆಂದರೆ,
- ಮಹಿಳಾ ನರ್ಸ್ ಇರಲೇಬೇಕು.
- ರೋಗಿಯು ಅಪ್ರಾಪ್ತ ವಯಸ್ಕಳಾಗಿದ್ದರೆ ಮಹಿಳಾ ನರ್ಸ್ ಜೊತೆಗೆ ಕುಟುಂಬದ ಮಹಿಳಾ ಸದಸ್ಯರನ್ನು ಇರಿಸಿಕೊಳ್ಳಬೇಕು.
ಆದಾಗ್ಯೂ, ಮೆಟ್ರೋ ನಗರಗಳು ಮತ್ತು ಬಿಹಾರ್ ನಡುವಿನ ವ್ಯತ್ಯಾಸವನ್ನು ಚಿತ್ರಿಸಿದ ಡಾ. ರೈ, ಮುಂಬೈ ಮತ್ತು ದೆಹಲಿಯಂತಹ ನಗರಗಳಲ್ಲಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಲು, ಪುರುಷ ಸ್ತ್ರೀ ರೋಗ ತಜ್ಞರನ್ನು ಸಂಪರ್ಕಿಸಲು ಹಿಂಜರಿಯುವುದಿಲ್ಲ. ಆದರೆ ಬಿಹಾರ್ದಂತಹ ರಾಜ್ಯಗಳಲ್ಲಿ ಇದು ಸ್ವಲ್ಪ ಸವಾಲಾಗಿದೆ. ಮಹಿಳೆಯರು ಇನ್ನೂ ಆ ಸಂದಿಗ್ಧತೆಯಿಂದ ಹೊರ ಬಂದಿಲ್ಲ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಮಹಿಳೆಯರ ಗರ್ಭಧಾರಣೆ ವೈಫಲ್ಯಕ್ಕೆ ಪುರುಷ ಬಂಜೆತನವೂ ಪ್ರಮುಖ ಕಾರಣ