ಧುಲೆ (ಮಹಾರಾಷ್ಟ್ರ): ಧುಲೆ ನಗರದಲ್ಲಿ ಮೂತ್ರಶಾಸ್ತ್ರಜ್ಞರಾಗಿ ಖ್ಯಾತರಾಗಿರುವ ಡಾ.ಆಶಿಶ್ ಪಾಟೀಲ್ ಅವರು ನಂದೂರ್ಬಾರ್ ಜಿಲ್ಲೆಯ ಪಟೋಲಿಯ ರೈತನಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಒಂದು ಕೆಜಿ ತೂಕದ ಕಲ್ಲನ್ನು ಹೊರತೆಗೆದಿದ್ದಾರೆ. ಸದ್ಯ ರೈತನ ಆರೋಗ್ಯ ಉತ್ತಮವಾಗಿದೆ. ಇವರ ಈ ಸಾಧನೆ ಇಂಡಿಯಾ ಬುಕ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸದ್ಯದಲ್ಲೇ ದಾಖಲಾಗಲಿದೆ ಎಂದು ಅವರು ತಿಳಿಸಿದರು. ವಿಶ್ವದಲ್ಲಿ ಇದುವರೆಗೆ ನಡೆದಿರುವ ಅತಿ ದೊಡ್ಡ ಕಿಡ್ನಿ ಶಸ್ತ್ರಚಿಕಿತ್ಸೆ ಇದಾಗಿದೆ.
ಡಾ. ಆಶಿಶ್ ಪಾಟೀಲ್ ಪ್ರಕಾರ, ನಂದೂರ್ಬಾರ್ ಜಿಲ್ಲೆಯ ಪಟೋಲಿಯನ 50 ವರ್ಷದ ರಾಮನ್ ಚೌರೆ ಕಳೆದ ಹಲವು ತಿಂಗಳುಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಹಲವು ಕಡೆ ತೋರಿಸಿದ್ರೂ, ಸಮಸ್ಯೆ ಬಗೆಹರಿದಿರಲಿಲ್ಲ. ಕೊನೆಗೆ ಧುಲೆಯಲ್ಲಿರುವ ಡಾ.ಆಶಿಶ್ ಪಾಟೀಲ್ ಅವರ ಬಳಿ ಚಿಕಿತ್ಸೆ ಪಡೆಯಲು ನಿರ್ಧರಿಸಿದರು. ಇಲ್ಲಿಗೆ ಬಂದಾಗ ಕಿಡ್ನಿಯಲ್ಲಿ ಸ್ಟೋನ್ ಇರುವುದು ತಿಳಿದುಬಂದಿದೆ. ನಂತರ ಡಾ. ಆಶಿಶ್ ಪಾಟೀಲ್ ಅವರ ‘ತೇಜನಾಕ್ಷ್ ಹಾಸ್ಪಿಟಲ್’ನಲ್ಲಿ ಒಂದು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಕಲ್ಲನ್ನು ಹೊರತೆಗೆಯಲಾಗಿದೆ.
ಇದನ್ನೂ ಓದಿ: ಸಪ್ತ ಸಾಗರದಾಚೆಯೆಲ್ಲೋ.. ಪ್ರೇಮಿ ಹುಡುಕಿಕೊಂಡು ಬಂದ ಪ್ಯಾರಿಸ್ ಯುವತಿ!
ಡಾ. ಆಶಿಶ್ ಪಾಟೀಲ್ ಸರ್ಕಾರದ ಯಾವುದೇ ಯೋಜನೆಯಿಂದ ಯಾವುದೇ ಪ್ರಯೋಜನ ಪಡೆಯದೇ, ರೋಗಿಯಿಂದ ಒಂದು ರೂಪಾಯಿ ತೆಗೆದುಕೊಳ್ಳದೆ ಉಚಿತವಾಗಿ ಈ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇವರನ್ನು ಗ್ರೀನ್ಸ್ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗಮನಿಸಿವೆ.