ಮುಂಬೈ: ಕೊರೊನಾ ವೈರಸ್ ಹರಡುವಿಕೆ ಕಡಿಮೆಯಾಗುತ್ತಿದ್ದಂತೆ ಮುಂಬೈನಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಹರಡುವಿಕೆ ಹೆಚ್ಚಾಗುತ್ತಿದೆ. ಮಹಾನಗರಿಯಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದ್ದ 63 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಸೋಂಕಿನಿಂದ ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ.
ಮಹಿಳೆಗೆ ಕೋವಿಡ್ ವ್ಯಾಕ್ಸಿನೇಷನ್ ಮಾಡಲಾಗಿದ್ದು, ಎರಡೂ ಡೋಸ್‌ಗಳನ್ನು ಅವರು ಪಡೆದಿದ್ದರು ಎಂಬುದು ಆತಂಕಕಾರಿ ವಿಚಾರವಾಗಿದೆ. ಮೂಲಗಳ ಪ್ರಕಾರ, ಮಹಿಳೆಯಲ್ಲಿ ಜುಲೈ 21ರಂದು ಕೋವಿಡ್ ಸೋಂಕು ಇರುವುದು ಕಂಡುಬಂದಿತ್ತು.
ಒಣ ಕೆಮ್ಮು, ರುಚಿ ಇಲ್ಲದಿರುವುದು, ಮೈಕೈ ನೋವು ಮತ್ತು ತಲೆನೋವು ಮುಂತಾದ ಲಕ್ಷಣಗಳು ಅವರಲ್ಲಿ ಕಂಡುಬಂದ್ದಿದ್ದವು. ಚಿಕಿತ್ಸೆ ನೀಡಿದರೂ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಆಕೆಯನ್ನು ಜುಲೈ 24ರಂದು ಐಸಿಯುಗೆ ದಾಖಲಿಸಲಾಗಿತ್ತು.
ತೀವ್ರತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಆಮ್ಲಜನಕ ಮತ್ತು ಸ್ಟಿರಾಯ್ಡ್ಗಳನ್ನು ನೀಡಲಾಗಿದ್ದು, ರೆಮ್ಡ್ಸಿವಿರ್ ಕೂಡಾ ಬಳಕೆ ಮಾಡಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದ ಮಹಿಳೆ ಜುಲೈ 27ರಂದು ಮರಣ ಹೊಂದಿದ್ದಾರೆ.
ಮೃತ ಮಹಿಳೆಯ ಮಾದರಿಯನ್ನು ಮತ್ತೆ ಸೋಂಕು ಪರೀಕ್ಷೆಗೆ ಒಳಪಡಿಸಿದಾಗ ಆಕೆ ಡೆಲ್ಟಾ ಪ್ಲಸ್ ವೈರಸ್ನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಇದನ್ನೂ ಓದಿ: ತನಗೆ ಕಚ್ಚಿದ ಹಾವನ್ನು ಕಚ್ಚಿ ಕೊಂದ ಭೂಪ: ಹೀಗೊಂದು ವಿಚಿತ್ರ ಸರ್ಪಸೇಡು