ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಮಾಂಸಾಹಾರದ ವಿಚಾರವಾಗಿ ಭಾನುವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆದಿತ್ತು. ಎರಡೂ ಬಣಗಳ ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದರು. ಘರ್ಷಣೆಯಲ್ಲಿ ಗಾಯಗೊಂಡ ಆರು ವಿದ್ಯಾರ್ಥಿಗಳು ಗಾಯಗೊಂಡ ಪ್ರಕರಣದಲ್ಲಿ ದೆಹಲಿ ಪೊಲೀಸರು ಸೋಮವಾರ ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಜೆಎನ್‌ಯುಎಸ್‌ಯು, ಎಸ್‌ಎಫ್‌ಐ, ಡಿಎಸ್‌ಎಫ್ ಮತ್ತು ಎಐಎಸ್‌ಎ ಸದಸ್ಯರಾಗಿರುವ ವಿದ್ಯಾರ್ಥಿಗಳು, ಅಪರಿಚಿತ ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಮನೋಜ್ ಸಿ. ಹೇಳಿದ್ದಾರೆ. ಅದರಂತೆ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 341 (ತಪ್ಪು ಸಂಯಮ), 509 (ಮಹಿಳೆಯರ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾತು, ಸನ್ನೆ ಅಥವಾ ಕೃತ್ಯ) ಮತ್ತು 34ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಗೆ ಸೇರಿದ ವಿದ್ಯಾರ್ಥಿಗಳು ಸಹ ಲಿಖಿತ ದೂರು ನೀಡುವುದಾಗಿ ತಿಳಿಸಿದ್ದಾರೆ. ಅವರ ದೂರನ್ನೂ ಸ್ವೀಕರಿಸಿದ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಜೆಎನ್‌ಯುನಲ್ಲಿ ಭಾನುವಾರ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆಗೆ ಸಂಭವಿಸಿತ್ತು. ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ಎಬಿವಿಪಿ ಬಲವಂತವಾಗಿ ಮಾಂಸಾಹಾರವನ್ನು ನಿಷೇಧಿಸಿದೆ ಎಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಆರೋಪಿಸಿದ್ದರು. ಹಾಗೆಯೇ ಎನ್‌ಎಸ್‌ಯುಐ ಸೇರಿದಂತೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರು ರಾಮನವಮಿ ಹಿನ್ನೆಲೆ ಪೂಜೆ ಮತ್ತು ಹವನ ನಡೆಸಲು ಅವಕಾಶ ನೀಡಿಲ್ಲ ಎಂದು ಎಬಿವಿಪಿ ಸದಸ್ಯರು ಆರೋಪಿಸಿದ್ದರು.
ಇದನ್ನೂ ಓದಿ: ಅವ್ರು ಮಾಂಸದೂಟ ಬೇಕು ಅಂದ್ರು, ಇವ್ರು ರಾಮನವಮಿ ದಿನ ಬೇಡ ಅಂದ್ರು.. ಇಷ್ಟಕ್ಕೆ ಜೆಎನ್‌ಯು ಕ್ಯಾಂಪಸ್ ರಕ್ತಸಿಕ್ತ!