ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತ 10ರಂದು ಮಹತ್ವದ ಜಿ-20 ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿದೆ. ದೆಹಲಿಯ 61 ರಸ್ತೆಗಳು ಮತ್ತು ಪ್ರಮುಖ ಸ್ಥಳಗಳನ್ನು 6.75 ಲಕ್ಷ ಹೂವಿನ ಮತ್ತು ಸಸಿ ಕುಂಡಗಳಿಂದ ಅಲಂಕರಿಸಲಾಗುತ್ತಿದೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ಕಚೇರಿ ಭಾನುವಾರ ತಿಳಿಸಿದೆ.
ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ ನಡೆಸಲಾಗಿದೆ. ಜಿ-20 ಶೃಂಗಸಭೆ ನಡೆಯುವ ರಸ್ತೆಗಳು ಹಾಗೂ ಸ್ಥಳಗಳಲ್ಲಿ ಅಲಂಕರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳನ್ನು ಗುರುತಿಸಿ ನಿರ್ದೇಶನಗಳನ್ನು ನೀಡಲಾಯಿತು. ನಿರ್ದಿಷ್ಟ ಸಂಖ್ಯೆಯ ಅಲಂಕಾರಿಕ ಸಸಿಗಳು ಹಾಗೂ ಹೂವು ಕುಂಡಗಳನ್ನು ಆಯಾ ಇಲಾಖೆಗಳಿಗೆ ನಿಗದಿ ಪಡಿಸಲಾಯಿತು. ಮೇಲಾಗಿ ತಮ್ಮ ಸ್ವಂತ ನರ್ಸರಿಗಳಿಂದ ಕುಂಡಗಳನ್ನು ಖರೀದಿಸುವ ಕಾರ್ಯವನ್ನು ಇಲಾಖೆಗಳಿಗೆ ವಹಿಸಲಾಯಿತು. ಇದು ಐದು ಇಲಾಖೆಗಳು ಹಾಗೂ ಏಜೆನ್ಸಿಗಳ ನಡುವೆ ಸಮನ್ವಯಕ್ಕೆ ನೆರವಾಗಲಿದೆ ಎಂದು ರಾಜ್ ನಿವಾಸ್ (ರಾಜಭವನ) ತಿಳಿಸಿದೆ.
ಇದನ್ನೂ ಓದಿ: Khalistan:'ದೆಹಲಿ ಖಲಿಸ್ತಾನ್ ಆಗುತ್ತೆ'.. ಜಿ20 ಸಭೆ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಖಲಿಸ್ತಾನಿ ಉಗ್ರರ ಪುಂಡಾಟದ ಬರಹ
ಹೂವು ಹಾಗೂ ಸಸಿ ಕುಂಡಗಳನ್ನು ಇರಿಸಲಾಗುವ ಸ್ಥಳಗಳು ಹಾಗೂ ಇದರ ಕಾರ್ಯದ ಪ್ರಗತಿಯನ್ನು ಲೆಫ್ಟಿನೆಂಟ್ ಗವರ್ನರ್ ಕಚೇರಿ ಮೇಲ್ವಿಚಾರಣೆ ಮಾಡುತ್ತಿದೆ. ಅರಣ್ಯ ಇಲಾಖೆ ಮತ್ತು ದೆಹಲಿ ಪಾರ್ಕ್ಸ್ ಮತ್ತು ಗಾರ್ಡನ್ ಸೊಸೈಟಿಗೆ 1.25 ಲಕ್ಷ ಸಸಿ ಮತ್ತು 2.5 ಲಕ್ಷ ಹೂವಿನ ಕುಂಡಗಳು ಸೇರಿ ಒಟ್ಟು 3.75 ಲಕ್ಷ ಕುಂಡಗಳು, ಲೋಕೋಪಯೋಗಿ ಇಲಾಖೆಗೆ 50 ಸಾವಿರ ಕುಂಡಗಳು, ದೆಹಲಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ನವದೆಹಲಿ ಮುನ್ಸಿಪಲ್ ಕೌನ್ಸಿಲ್ಗೆ ಒಂದು ಲಕ್ಷ ಕುಂಡಗಳು ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ಗೆ 50 ಸಾವಿರ ಕುಂಡಗಳ ಹೊಣೆ ವಹಿಸಲಾಗಿದೆ ಎಂದು ಹೇಳಿದೆ.
61 ರಸ್ತೆಗಳಲ್ಲಿ ಈಗಾಗಲೇ 4.05 ಲಕ್ಷ ಅಲಂಕಾರಿಕ ಸಸಿಗಳು ಹಾಕಲಾಗಿದ್ದು, ಉಳಿದಿರುವ ಹೂವಿನ ಗಿಡಗಳನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಹಾಕಲಾಗುವುದು. ಇದರಿಂದ ಜಿ-20 ಶೃಂಗಸಭೆಯ ಅವಧಿಯಲ್ಲಿ ಸಸ್ಯಗಳು ಸಂಪೂರ್ಣವಾಗಿ ಅರಳುತ್ತವೆ. ಸಸಿಗಳಿಂದ ಅಲಂಕರಿಸಲ್ಪಟ್ಟ ಪ್ರಮುಖ ಸ್ಥಳಗಳೆಂದರೆ ಸರ್ದಾರ್ ಪಟೇಲ್ ಮಾರ್ಗ, ಮದರ್ ತೆರೇಸಾ ಕ್ರೆಸೆಂಟ್, ತೀನ್ ಮೂರ್ತಿ ಮಾರ್ಗ, ಧೌಲಾ ಕುವಾನ್-ಐಜಿಐ ವಿಮಾನ ನಿಲ್ದಾಣ ರಸ್ತೆ, ಪಾಲಂ ತಾಂತ್ರಿಕ ಪ್ರದೇಶ, ಇಂಡಿಯಾ ಗೇಟ್, ಮಂಡಿ ಹೌಸ್, ಅಕ್ಬರ್ ರಸ್ತೆ ವೃತ್ತ, ದೆಹಲಿ ಗೇಟ್, ರಾಜ್‌ಘಾಟ್ ಸೇರಿ ಇತ್ಯಾದಿ ಪ್ರದೇಶಗಳು ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಮಾಹಿತಿ ನೀಡಿದೆ.
2022ರ ಡಿಸೆಂಬರ್ 1ರಂದು ಇಂಡೋನೇಷ್ಯಾ ನಂತರ ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ಭಾರತದ ಅಧ್ಯಕ್ಷತೆಯಲ್ಲಿ ಜಿ20 ವಿಶ್ವ ನಾಯಕರ ಶೃಂಗಸಭೆ ನಡೆಯಲಿದೆ. 20ಕ್ಕೂ ಹೆಚ್ಚು ದೇಶಗಳಿಂದ ಉನ್ನತ ನಾಯಕರು ಹಾಗೂ ನಿಯೋಗಗಳ ಪ್ರತಿನಿಧಿಗಳು ಶೃಂಗಸಭೆಗಾಗಿ ರಾಷ್ಟ್ರ ರಾಜಧಾನಿಗೆ ಬರಲಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡನ್