ಜಮ್ಶೆಡ್‌ಪುರ(ಜಾರ್ಖಂಡ್): ಫ್ಲ್ಯಾಟ್‌ವೊಂದರಲ್ಲಿ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್, 10 ವರ್ಷದ ಮಗಳು ಮತ್ತು ತಾಯಿಯ ಮೃತದೇಹಗಳು ಪತ್ತೆಯಾಗಿದ್ದು ಪ್ರಕರಣ ಸಂಚಲನ ಉಂಟುಮಾಡಿದೆ. ಸುದ್ದಿ ತಿಳಿದ ತಕ್ಷಣ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದು, ವಿಧಿವಿಜ್ಞಾನ ತಂಡ ತನಿಖೆ ಕೈಗೊಂಡಿದೆ. ಮೂವರು ಕೊಲೆ ಆಗಿರಬಹುದೆಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.
ಗೋಲ್ಮುರಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಲೈನ್‌ನ ಸಿಬ್ಬಂದಿ ಕ್ವಾರ್ಟರ್ಸ್‌ನಲ್ಲಿ ಕಾನ್‌ಸ್ಟೇಬಲ್ ಸವಿತಾ ರಾಣಿ ಹೆಂಬ್ರಾಮ್, ವೃದ್ಧ ತಾಯಿ ಲಖಿಯಾ ಹೆಂಬ್ರಾಮ್ ಮತ್ತು ಮಗಳ ಶವಗಳು ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದಿವೆ.
ಇದನ್ನೂ ಓದಿ: ಪ್ರೇಯಸಿಯ ಭೀಕರ ಹತ್ಯೆ: ರುಂಡದ ಜೊತೆ ಪೊಲೀಸ್ ಠಾಣೆಗೆ ಬಂದ ಘಾತುಕ
ಮೂರು ದಿನ ಮನೆ ಬಂದ್: ಸವಿತಾ ರಾಣಿ ಅವರನ್ನು ಎಸ್‌ಎಸ್‌ಪಿ ಕಚೇರಿಯಲ್ಲಿ ನಿಯೋಜನೆ ಮಾಡಲಾಗಿತ್ತು. ನಕ್ಸಲ್ ದಾಳಿಯಲ್ಲಿ ಪತಿ ಸಾವನ್ನಪ್ಪಿದ ನಂತರ ಅನುಕಂಪದ ಆಧಾರದ ಮೇಲೆ ಇವರಿಗೆ ಕೆಲಸ ಸಿಕ್ಕಿತ್ತು. ಕಳೆದ ಮಂಗಳವಾರದಿಂದ ಆಕೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ತಾಯಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದ ಸವಿತಾ ಮನೆಗೆ ಕಳೆದ ಎರಡು ದಿನಗಳಿಂದ ಹೊರಗಿನಿಂದ ಬೀಗ ಹಾಕಲಾಗಿತ್ತು. ಮನೆಗೆ ಬೀಗ ಹಾಕಿದ್ದರಿಂದ ಅಕ್ಕಪಕ್ಕದ ಜನರಿಗೆ ಅನುಮಾನ ಮೂಡಿದೆ. ಗುರುವಾರ ಮನೆಯಿಂದ ದುರ್ವಾಸನೆ ಬರುತ್ತಿದ್ದಾಗ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
"ಮೂವರ ಮೃತದೇಹಗಳು ಕೋಣೆಯಲ್ಲಿ ದೊರೆತಿವೆ. ದೇಹದ ಮೇಲೆ ದಾಳಿಯ ಗುರುತುಗಳಿವೆ. ಮೇಲ್ನೋಟಕ್ಕೆ ಇದೊಂದು ಕೊಲೆ ಪ್ರಕರಣ ಎಂದು ತೋರುತ್ತದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ" ಎಂದು ಜೆಮ್‌ಶೆಡ್‌ಪುರ ಎಸ್‌ಎಸ್‌ಪಿ ಪ್ರಭಾತ್ ಕುಮಾರ್ ತಿಳಿಸಿದರು.