ಜೈಪುರ: ದೌಸಾದಲ್ಲಿ ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕಾರಣಿಗಳ ಆರೋಪ, ಪ್ರತ್ಯಾರೋಪಗಳ ನಡುವೆಯೇ ರಾಜಸ್ಥಾನ ಸರ್ಕಾರ ಹಾಗೂ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸಿ ಬಿಜೆಪಿ ಮುಖಂಡರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಜೈಪುರದಲ್ಲಿ ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಗೋಥ್ವಾಲ್ ಅವರ ನಿವಾಸದಲ್ಲಿ ವಶಕ್ಕೆ ತೆಗೆದುಕೊಂಡ ನಂತರ ವಿಚಾರಣೆಗಾಗಿ ದೌಸಾ ಲಾಲ್ಸೋಟ್‌ಗೆ ಕರೆದೊಯ್ದಿದ್ದಾರೆ. ಪ್ರಕರಣದ ತನಿಖೆ ಹೆಸರಿನಲ್ಲಿ ಗೋಥ್ವಾಲ್ ಅವರನ್ನು ವಶಕ್ಕೆ ಪಡೆಯುವ ಸಲುವಾಗಿ ಬುಧವಾರ ರಾತ್ರಿ 1:45 ರ ಸುಮಾರಿಗೆ ಪೊಲೀಸರು ಸಾಮಾನ್ಯ ಉಡುಪಿನಲ್ಲಿ ಜೈಪುರದ ಬಿಜೆಪಿ ನಾಯಕನ ನಿವಾಸಕ್ಕೆ ಆಗಮಿಸಿದ್ದರು.
ಈ ವೇಳೆ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಜಮಾಯಿಸಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಡಾ.ಅರುಣ್ ಚತುರ್ವೇದಿ ಕೂಡ ಅಲ್ಲಿಗೆ ಆಗಮಿಸಿ ಪೊಲೀಸರ ಕಾರ್ಯಶೈಲಿಯ ಬಗ್ಗೆ ಕಿಡಿಕಾರಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ಅವರು ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬದೊಂದಿಗೆ ಲಾಲ್ಸೋಟ್‌ನಲ್ಲಿ ಧರಣಿ ನಡೆಸುವ ಮೂಲಕ ಆರ್ಥಿಕ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿದ್ದರು.
ಏನಿದು ಪ್ರಕರಣ?: ಕಳೆದ ಸೋಮವಾರ ಲಾಲ್ಸೋಟ್‌ನ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ನಂತರ ಮಹಿಳೆ ಸಾವನ್ನಪ್ಪಿದ್ದರು. ನಂತರ ಮೃತಳ ಸಂಬಂಧಿಕರು ಮತ್ತು ಸ್ಥಳೀಯ ಮುಖಂಡರು ಒಟ್ಟಾಗಿ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡಿ ಗದ್ದಲ ಸೃಷ್ಟಿಸಿದ್ದರು. ಇದಾದ ಬಳಿಕ ಆಸ್ಪತ್ರೆ ನಡೆಸುತ್ತಿದ್ದ ದಂಪತಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಪೊಲೀಸ್ ಸಿಬ್ಬಂದಿಯ ತನಿಖೆ ಮತ್ತು ಮುಖಂಡರ ಗಲಾಟೆಯಿಂದ ಮಾನಸಿಕ ಹಿಂಸೆ ಅನುಭವಿಸಿದ್ದ ಆಸ್ಪತ್ರೆಯ ನಿರ್ವಾಹಕಿ ಡಾ.ಅರ್ಚನಾ ಶರ್ಮಾ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿತ್ತು.
ಈ ಸುದ್ದಿ ಮುನ್ನೆಲೆಗೆ ಬಂದ ನಂತರ ದೌಸಾ ಸೇರಿದಂತೆ ರಾಜ್ಯದ ಎಲ್ಲ ವೈದ್ಯಕೀಯ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ದೌಸಾ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಬಹಿಷ್ಕರಿಸಲಾಗಿದ್ದು, ಜಿಲ್ಲಾದ್ಯಂತ ಎಲ್ಲಾ ವೈದ್ಯಕೀಯ ಸೇವೆಗಳು ಸ್ಥಗಿತಗೊಂಡಿವೆ.
ಇದನ್ನೂ ಓದಿ: ಆಂಧ್ರದ ಶ್ರೀಶೈಲಂನಲ್ಲಿ ಕನ್ನಡಿಗರು, ಸ್ಥಳೀಯರ ನಡುವೆ ಘರ್ಷಣೆ: ವಾಹನಗಳು, ಅಂಗಡಿಗಳಿಗೆ ಹಾನಿ