ಹರಿದ್ವಾರ (ಉತ್ತರಾಖಂಡ): ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣಬಿಟ್ಟ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಸ್ಥಿಯನ್ನು ಗಂಗಾ ನದಿಯಲ್ಲಿ ಅವರ ಪುತ್ರಿಯರು ವಿಸರ್ಜನೆ ಮಾಡಿದ್ದಾರೆ.
ಇಂದು ಬೆಳಗ್ಗೆ ದೆಹಲಿಯ ಬ್ರಾರ್ ಸ್ಕ್ವೇರ್ ಚಿತಾಗಾರದಿಂದ ತಮ್ಮ ಪೋಷಕರ ಚಿತಾಭಸ್ಮವನ್ನು ರಾವತ್ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಸಂಗ್ರಹಿಸಿದ್ದರು. ಅಲ್ಲಿಂದ ಉತ್ತರಾಖಂಡದ ಹರಿದ್ವಾರಕ್ಕೆ ಸೇನಾ ಗೌರವದೊಂದಿಗೆ ಚಿತಾಭಸ್ಮವನ್ನು ತಂದು ಗಂಗಾ ನದಿಯಲ್ಲಿ ವಿಸರ್ಜಿಸಿದರು.
ಅಸ್ಥಿ ವಿಸರ್ಜನೆಗೆ ಉತ್ತರಾಖಂಡ ಸರ್ಕಾರದ ಪರವಾಗಿ ಸಂಪುಟದ ಸಚಿವರಾದ ಸ್ವಾಮಿ ಯತೀಶ್ವರಾನಂದ್ ಮತ್ತು ಧನ್ ಸಿಂಗ್ ರಾವತ್ ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ವಿಧಾನಸಭಾ ಸ್ಪೀಕರ್ ಪ್ರೇಮಚಂದ್ ಅಗರ್ವಾಲ್, ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಕೌಶಿಕ್ ಮತ್ತು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಕೂಡ ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: ವೀರ ಪುತ್ರರಿಗೆ ಕಣ್ಣೀರಿನ ವಿದಾಯ; ಅಂತಿಮ ವಿಧಿವಿಧಾನದ ವೇಳೆ ಭಾವುಕರಾದ ಪುತ್ರಿಯರು
ಕೂನೂರು ಹೆಲಿಕಾಪ್ಟರ್ ಅಪಘಾತ
ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಬಿಪಿನ್ ರಾವತ್, ಮಧುಲಿಕಾ ಹಾಗೂ ಇತರ 11 ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ದೆಹಲಿಯಲ್ಲಿ ನಿನ್ನೆ ಬಿಪಿನ್ ರಾವತ್ ಮತ್ತು ಮಧುಲಿಕಾ ಅವರ ಅಂತ್ಯಕ್ರಿಯೆಯನ್ನು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗಿತ್ತು.