ವಿಲ್ಲುಪುರಂ(ತಮಿಳುನಾಡು): ಹೆತ್ತ ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಪಾಪಿ ತಂದೆಯನ್ನ ಮಗಳೇ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೋವಿಲ್ಪುರೈಯೂರ್ನಲ್ಲಿ ನಡೆದಿದೆ. ಆತ್ಮರಕ್ಷಣೆಗೋಸ್ಕರ ಈ ಕೃತ್ಯ ಎಸಗಿರುವುದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
40 ವರ್ಷದ ವೆಂಕಟೇಶನ್ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಪತ್ನಿ ಸಾವನ್ನಪ್ಪಿದ್ದಳು. ವೆಂಕಟೇಶನ್ ಹಿರಿಯ ಮಗಳು ಚೆನ್ನೈನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಎರಡನೇ ಮಗಳು ಅವಳೂರಿನ ಕಾಲೇಜ್ನಲ್ಲಿ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವೆಂಕಟೇಶನ್ ಅಂಗವಿಕಲ ವ್ಯಕ್ತಿಯಾಗಿದ್ದು, ಸ್ಥಳೀಯ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲು ಪಕ್ಕದ ಊರಿಗೆ ತೆರಳಿದ್ದರು. ಅಲ್ಲಿಂದ ವಾಪಸ್ ಮನೆಗೆ ಬಂದು ಮಗಳಿಗೆ ಕಿರುಕುಳ ನೀಡಿದ್ದು, ಈ ವೇಳೆ ಆತನ ಕೊಲೆಯಾಗಿದೆ.
ಇದನ್ನ ನೋಡಿರುವ ವೆಂಕಟೇಶನ್ ಸಂಬಂಧಿಕರು & ನೆರೆಹೊರೆಯವರು ಅವಲೂರುಪೇಟೆ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿಬ್ಬಂದಿ ಮೃತದೇಹವನ್ನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ. ಈ ವೇಳೆ ವೆಂಕಟೇಶನ್ ಅವರ ಎರಡನೇ ಮಗಳ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿರಿ: ಕಪಿಲ್ ಶರ್ಮಾಗೆ ವಂಚನೆ ಪ್ರಕರಣ: ಕಾರು ಡಿಸೈನರ್ ದಿಲೀಪ್ ಛಾಬ್ರಿಯಾ ಪುತ್ರನ ಬಂಧನ
ಆತ್ಮರಕ್ಷಣೆಗೆ ಕೊಲೆ ಎಂದ ಮಗಳು
ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಎರಡನೇ ಮಗಳು, ಆತ್ಮರಕ್ಷಣೆಗೋಸ್ಕರ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಮೇಲಿಂದ ಮೇಲೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದನು ಎಂದು ಹೇಳಿದ್ದಾರೆ. ಹೀಗಾಗಿ ಆಕೆಯ ಬಂಧನ ಮಾಡಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್, ಆತ್ಮರಕ್ಷಣೆಗಾಗಿ ತಂದೆಯನ್ನ ಕೊಂದಿರುವ ಬಾಲಕಿಯನ್ನ ರಿಲೀಸ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ.