ಹೈದರಾಬಾದ್: ತಂತ್ರಜ್ಞಾನದ ಬೆಳವಣಿಗೆ ಸಮಾಜಕ್ಕೆ ಎಷ್ಟು ಪೂರಕವೋ ಅಷ್ಟೇ ಮಾರಕ ಕೂಡ ಹೌದು. ಸದ್ಯಕ್ಕೆ ಎಲ್ಲವೂ ಆನ್‌ಲೈನ್‌ಮಯವಾಗಿದೆ. ಆನ್‌ಲೈನ್ ಪೇಮೆಂಟ್, ಆನ್‌ಲೈನ್ ಆರ್ಡರ್ ಹೀಗೆ ಎಲ್ಲವನ್ನೂ ಕುಳಿತ ಜಾಗದಲ್ಲಿಯೇ ಮಾಡಬಹುದು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕೆಲವು ಖದೀಮರು ಜನಸಾಮಾನ್ಯರನ್ನು ವಂಚಿಸಿ ಹಣ ದೋಚುತ್ತಿದ್ದಾರೆ.
ಹೌದು, ಹಣ ಪಾವತಿಸದ ಕಾರಣ ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸುವುದಾಗಿ ಸಂದೇಶ ಕಳುಹಿಸಿದ ಆನ್‌ಲೈನ್ ವಂಚಕರು 28 ಲಕ್ಷ ರೂಪಾಯಿ ವಂಚಿಸಿದ್ದಾರೆಂದು ಆರೋಪಿಸಿ 60 ವರ್ಷದ ಮಹಿಳೆಯೊಬ್ಬರು ಹೈದರಾಬಾದ್‌ನ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಲಿಂಕ್ ಕಳಿಸಿ ಒಂದೇ ದಿನ ಹತ್ತಾರು ಖಾತೆಗಳಿಗೆ ಕನ್ನ ಹಾಕಿದ ಸೈಬರ್ ವಂಚಕರು
ಹಿಮಾಯತನಗರದ ವೃದ್ಧೆಯೊಬ್ಬರಿಗೆ ‘ಕರೆಂಟ್ ಬಿಲ್ ಪಾವತಿಸದ ಕಾರಣಕ್ಕೆ ಇಂದು ರಾತ್ರಿ 9:30ಕ್ಕೆ ನಿಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ’ ಎಂಬ ಸಂದೇಶ ಬಂದಿದೆ. ಬಳಿಕ ಸಂತ್ರಸ್ತೆ ಈ ಸಂಖ್ಯೆಗೆ ಕರೆ ಮಾಡಿದಾಗ, ಬಿಲ್ ಪಾವತಿಸಲು ಏನಿ ಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದಾರೆ. ಬಳಿಕ ಡೆಬಿಟ್ ಕಾರ್ಡ್ ಮೂಲಕ 10 ರೂ. ಕಳುಹಿಸಿದ್ದಾರೆ. ತಕ್ಷಣವೇ ಕಾರ್ಡ್ ವಿವರ ಪತ್ತೆಹಚ್ಚಿದ ಖದೀಮರು ಖಾತೆಯಲ್ಲಿದ್ದ ಒಟ್ಟು 28 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.