ಕಟಕ್ (ಒಡಿಶಾ): ಇಲ್ಲೊಬ್ಬ ಮಹಿಳೆ ತನಗೆ ಸೇರಿದ 1 ಕೋಟಿಗೂ ಅಧಿಕ ಬೆಲೆಬಾಳುವ ಮೂರಂತಸ್ತಿನ ಮನೆಯನ್ನು ಆಟೋರಿಕ್ಷಾ ಚಾಲಕನಿಗೆ ಬರೆದುಕೊಟ್ಟು ಅಚ್ಚರಿ ಮೂಡಿಸಿದ್ದಾರೆ.
ಒಡಿಶಾದ ಕಟಕ್ ನಿವಾಸಿ ಮಿನಾತಿ ಪಟ್ನಾಯಕ್ ಎಂಬ ಮಹಿಳೆ 25 ವರ್ಷಗಳಿಂದ ತಮ್ಮ ಕುಟುಂಬಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಕ್ಕಾಗಿ ಅವರ ಇಡೀ ಆಸ್ತಿಯನ್ನೇ ಬಡ ಆಟೋ ರಿಕ್ಷಾ ಚಾಲಕನಿಗೆ ಬರೆದುಕೊಟ್ಟು ಔದಾರ್ಯ ಮೆರೆದರು.
ಬುಧ ಸಮಾಲ್ ಎಂಬ ಆಟೋ ರಿಕ್ಷಾ ಓಡಿಸುವ ವ್ಯಕ್ತಿ ಮಿನಾತಿ ಪಟ್ನಾಯಕ್ ಅವರ ಕುಟುಂಬಕ್ಕೆ 25 ವರ್ಷಗಳಿಂದ ಚಿರಪರಿಚಿತ. ಅವರ ಕುಟುಂಬಸ್ಥರ ಸಂಚಾರಕ್ಕಾಗಿ ಬುಧ ಸಮಾಲ್ ಆಟೋ ರಿಕ್ಷಾವೇ ಮೂಲವಾಗಿತ್ತು.
ಈ ಮಧ್ಯೆ 6 ತಿಂಗಳ ಅವಧಿಯಲ್ಲಿ ಮಿನಾತಿ ಪಟ್ನಾಯಕ್ ಅವರ ಪತಿ ಹಾಗೂ ಮಗ ತೀರಿಕೊಂಡಿದ್ದರು. ಇದರಿಂದ ಏಕಾಂಗಿಯಾದ ಅವರನ್ನು ರಿಕ್ಷಾ ಚಾಲಕ ಬುಧ ಸಮಾಲ್ ಮತ್ತು ಅವನ ಪತ್ನಿ ನೋಡಿಕೊಳ್ಳುತ್ತಿದ್ದರು.
ಸಂಬಂಧಿಕರಿದ್ದರೂ ಏಕಾಂಗಿಯಂತಾದ ಮಿನಾತಿ ಪಟ್ನಾಯಕ್ ಅವರು ಬೇಸತ್ತು, ಇದೀಗ ಮನೆಯನ್ನು ರಿಕ್ಷಾ ಚಾಲಕನ ಹೆಸರಿಗೆ ಬರೆದು ಉಯಿಲು ಮಾಡಿಸಿದ್ದಾರೆ.
'2020ರಲ್ಲಿ ನನ್ನ ಪತಿ ತೀರಿಕೊಂಡರೆ, 2021ರಲ್ಲಿ ನನ್ನ ಮಗನನ್ನು ಕಳೆದುಕೊಂಡೆ. ಇದರಿಂದ ಜೀವನದಲ್ಲಿ ಒಂಟಿಯಾದೆ. ಸಂಬಂಧಿಕರಿದ್ದರೂ ಯಾರೂ ಕೂಡ ನನ್ನ ನೆರವಿಗೆ ಬರಲಿಲ್ಲ. ಬುಧ ಸಮಾಲ್ ಕುಟುಂಬ ನನ್ನನ್ನು ಹಾರೈಕೆ ಮಾಡುತ್ತಿದೆ. ಇವರ ನಿಸ್ವಾರ್ಥ ಸೇವೆಗಾಗಿ ನನ್ನ ಆಸ್ತಿಯನ್ನು ಅವರ ಹೆಸರಿಗೇ ಬರೆದಿದ್ದೇನೆ' ಎಂದು ಪಟ್ನಾಯಕ್ ಹೇಳಿದರು.
ರಿಕ್ಷಾ ಚಾಲಕನ ನಿಸ್ವಾರ್ಥ ಸೇವೆಗೆ ಈಗ ಕೋಟಿ ರೂಪಾಯಿ ಆಸ್ತಿ ಒಲಿದುಬಂದಿದೆ.