ಸತಾರ ( ಮಹಾರಾಷ್ಟ್ರ): ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆಯಾಗಿರುವ ಅಘಾತಕಾರಿ ಘಟನೆ ಸತಾರಾ ಜಿಲ್ಲೆಯ ಪಟಾನ್ ತಾಲೂಕಿನ ಧೇಬೆವಾಡಿ ಕಣಿವೆಯ ಸಂಬೂರ್ ಗ್ರಾಮದಲ್ಲಿ ನಡೆದಿದೆ. ಸದ್ಯ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಯು ಜಿಲ್ಲಾದ್ಯಂತ ಸಂಚಲನ ಮೂಡಿಸಿದೆ. ದಂಪತಿ, ಅವಿವಾಹಿತ ಪುತ್ರ ಹಾಗೂ ವಿವಾಹಿತ ಪುತ್ರಿಯ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಆನಂದ ಪಾಂಡುರಂಗ ಜಾಧವ್ (70), ಪತ್ನಿ ಸುಮನ್ ಜಾಧವ್, ಮಗ ಸಂತೋಷ್ ಜಾಧವ್ ಮತ್ತು ವಿವಾಹಿತ ಪುತ್ರಿ ಪುಷ್ಪಾ ದಾಸ್ ಎಂದು ಗುರುತಿಸಲಾಗಿದೆ.
ಘಟನೆಯಿಂದ ಸಂಬೂರು ಗ್ರಾಮಸ್ಥರಲ್ಲಿ ಆತಂಕ: ಕುಟುಂಬದ ಯಜಮಾನ ಆನಂದ ಜಾಧವ್ ಶಿಕ್ಷಕರಾಗಿದ್ದು, ಜಾಧವ್ ಕುಟುಂಬವು ಹಲವು ವರ್ಷಗಳಿಂದ ಸಂಬೂರ್ ಗ್ರಾಮದಿಂದ ದೂರದಲ್ಲಿ ವಾಸಿಸುತ್ತಿತ್ತು. ನಾಲ್ವರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದ ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಸಂಬೂರು ಗ್ರಾಮದಲ್ಲಿ ತಲ್ಲಣ ಸೃಷ್ಟಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡುವಂತೆ ಮಾಡಿದೆ .
ವೈದ್ಯರೊಂದಿಗೆ ಘಟನಾ ಸ್ಥಳ ಪರಿಶೀಲಿಸಿದ ಪೊಲೀಸರು: ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಧೆಬೆವಾಡಿ ಪೊಲೀಸ್ ಠಾಣೆಯ ಪೊಲೀಸರು ವೈದ್ಯರ ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಘಟನೆ ಕುರಿತು ತನಿಖೆ ಚುರುಕುಗೊಳಿಸಿದ್ದಾರೆ. ಜಾಧವ್ ಅವರ ಕುಟುಂಬವು ಗ್ರಾಮದಿಂದ ದೂರ ವಾಸಿಸುತ್ತಿರುವುದರಿಂದ ಘಟನೆ ಯಾವಾಗ ಸಂಭವಿಸಿತು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ: ಗಾಂಜಾ ಅಮಲಿನಲ್ಲಿ ನಡುರಸ್ತೆಯಲ್ಲಿ ಪುಡಿರೌಡಿಗಳ ಅಟ್ಟಹಾಸ: ಸಿಸಿಟಿವಿ ದೃಶ್ಯ
ಹೋಟೆಲ್ ಕ್ಯಾಶಿಯರ್ ಭೀಕರ ಹತ್ಯೆ: ಬೆಂಗಳೂರು ನಗರದ ಪ್ರತಿಷ್ಠಿತ ಹೋಟೆಲ್ನ ಕ್ಯಾಶಿಯರ್ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜೂ.20ರಂದು ಇಲ್ಲಿನ ಜೀವನ್ ಭೀಮಾನಗರ ಮುರುಗೇಶ್ ಪಾಳ್ಯದಲ್ಲಿ ನಡೆದಿತ್ತು. ಖಾಸಗಿ ಹೋಟೆಲ್ ಅಂಡ್ ಸರ್ವಿಸ್ ಅಪಾರ್ಟ್‌ಮೆಂಟಿನ ಕ್ಯಾಶಿಯರ್ ಸುಭಾಷ್ ಕೊಲೆಯಾದವರು ಎಂದು ಗುರುತಿಸಲಾಗಿತ್ತು.
ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬಾತನಿಂದ ಕೃತ್ಯ ನಡೆದಿದ್ದು, ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸುಭಾಷ್ ವಾಸವಿದ್ದ ರೂಮಿನಲ್ಲಿ ಸೋಫಾ ಮೇಲೆ ಮಲಗಿದ್ದಾಗ ಆತನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ನಿನ್ನೆ ಬೆಳಗ್ಗೆ 6:30ರ ಸುಮಾರಿಗೆ ನವೀನ್ ಎಂಬುವವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು. ತಕ್ಷಣ ಎಸಿಪಿ ರಾಮಚಂದ್ರ ಹಾಗೂ ಇನ್ಸ್‌ಪೆಕ್ಟರ್ ರಾಜಣ್ಣ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದಾಗ ಕೊಲೆ ಮಾಡಿದ ನಂತರ ಕ್ಯಾಶ್ ಡ್ರಾಯರ್ನಲ್ಲಿದ್ದ ಸ್ವಲ್ಪ ಹಣವನ್ನ ತೆಗೆದುಕೊಂಡು, ಸಿಸಿಟಿವಿ ಕ್ಯಾಮರಾವನ್ನು ಧ್ವಂಸಗೊಳಿಸಿ ಆರೋಪಿ ಪರಾರಿಯಾಗಿದ್ದ.
ಇದನ್ನೂ ಓದಿ: ಪತಿಯನ್ನು ಪ್ರಿಯಕರನಿಂದ ಕೊಲ್ಲಿಸಿ ಮಿಸ್ಸಿಂಗ್ ಕೇಸು ದಾಖಲಿಸಿದ ಪತ್ನಿ, ಇಬ್ಬರ ಬಂಧನ