ಜೋಧಪುರ (ರಾಜಸ್ಥಾನ): ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದು ಸುಡಲು ಯತ್ನಿಸಿರುವ ಆಘಾತಕಾರಿ ಘಟನೆ ಜೋಧಪುರದ ಓಸಿಯಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ರಾಮನಗರ ಗ್ರಾಮ ಪಂಚಾಯತ್‌ನ ಗಂಗಾನಿ ಕಿ ಧಾನಿ ಎಂಬಲ್ಲಿ ವಾಸಿಸುತ್ತಿರುವ ಕುಟುಂಬದ ನಾಲ್ವರು ಸದಸ್ಯರ ಮೃತದೇಹಗಳು ಕೊಲೆಗೈದು ಅರೆಸುಟ್ಟ ಪರಿಸ್ಥಿತಿಯಲ್ಲಿ ದೊರೆತಿವೆ. ಮೃತರನ್ನು ಕುಟುಂಬದ ಮುಖ್ಯಸ್ಥ ಪೂನರಾಮ್ ಬೈರ್ಡ್ (55), ಪತ್ನಿ ಭನ್ವಾರಿದೇವಿ (50), ಸೊಸೆ ಧಾಪು (24) ಹಾಗೂ ಏಳು ತಿಂಗಳ ಮೊಮ್ಮಗಳು ಎಂದು ಗುರುತಿಸಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣಾ ವರಿಷ್ಠಾಧಿಕಾರಿ ಧರ್ಮೇಂದ್ರ ಸಿಂಗ್ ಯಾದವ್ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿದ ಅವರು, "ರಾಮನಗರ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕುಟುಂಬದ ನಾಲ್ವರು ಸದಸ್ಯರ ಪೈಕಿ ಹೆಣ್ಣು ಮಗುವೂ ಸೇರಿದೆ. ನಾಲ್ವರೂ ಕತ್ತು ಸೀಳಿ, ಸುಟ್ಟ ಸ್ಥತಿಯಲ್ಲಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಕೊಲೆ ಮಾಡಿದ ನಂತರ ದೇಹಗಳನ್ನು ಅವರ ಗುಡಿಸಲಿನಲ್ಲಿ ಸುಡಲು ಪ್ರಯತ್ನಿಸಿರುವುದು ತಿಳಿಯುತ್ತದೆ. ಬುಧವಾರ ಮುಂಜಾನೆ ಘಟನೆ ನಡೆದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ" ಎಂದು ತಿಳಿಸಿದರು.
"ಹಂತಕರು ಮಲಗಿದ್ದ ನಾಲ್ವರನ್ನು ಮೊದಲು ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಆ ನಂತರ ಗುಡಿಸಲಿಗೆ ಬೆಂಕಿ ಹಚ್ಚಿ ಅವರ ಮೃತದೇಹಗಳನ್ನು ಗುಡಿಸಲಿನೊಳಗೆ ಹಾಕಿದ್ದಾರೆ. ಅದರಲ್ಲಿ ಏಳು ತಿಂಗಳ ಮಗುವಿನ ದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಉಳಿದ ಮೂವರ ದೇಹಗಳು ಅರ್ಧ ಸುಟ್ಟ ಸ್ಥಿತಿಯಲ್ಲಿದ್ದವು" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭೀಕರ ಹತ್ಯೆಯ ವಿಷಯ ತಿಳಿದು ನೂರಾರು ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದರು. ಸಾರ್ವಜನಿಕರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಘಟನೆ ನಡೆದ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: Bengaluru crime: ಮಂಗಳೂರು ಮೂಲದ ದಂಪತಿ ಭೀಕರ ಹತ್ಯೆ.. ಪುತ್ರನಿಂದಲೇ ಕೃತ್ಯ!