ಹೈದರಾಬಾದ್: ಕೋವಿಡ್-19 ಎರಡನೇ ಅಲೆಯು ಈಗಾಗಲೇ ದೇಶಾದ್ಯಂತ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಕೊರೊನಾ ಸೋಂಕಿನ ಪ್ರಕರಣಗಳು ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು ಸಾಕಷ್ಟು ಹಾನಿಯನ್ನುಂಟುಮಾಡಿದೆ. ಆದರೆ ಈ ಬಾರಿ 2ನೇ ಅಲೆಯ ಸಮಯದಲ್ಲಿ ವಯಸ್ಕರಿಗೆ ಮಾತ್ರವಲ್ಲದೆ ಮಕ್ಕಳಿಗೂ ಸಹ ಸೋಂಕಿನ ಪರಿಣಾಮವಾಗುತ್ತಿರುವುದು ಆತಂಕಕಾರಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎನ್ನಲಾಗ್ತಿದೆ.
ಕೋವಿಡ್ 2ನೇ ಅಲೆಯ ಕುರಿತಾಗಿ 'ಈಟಿವಿ ಭಾರತ ಸುಖೀಭವ' ತಂಡವು ಹೈದರಾಬಾದಿನ ರೇನ್ಬೋ ಚಿಲ್ಡ್ರನ್ಸ್ ಹಾಸ್ಪಿಟಲ್ನ ನಿಯೊನ್ಯಾಟೊಲಾಜಿ ವಿಭಾಗದ ತಜ್ಞವೈದ್ಯ ಡಾ. ವಿಜಯಾನಂದ ಜಮಾಲಪುರಿ, ಎಂಡಿ, ಎಫ್ಆರ್ಸಿಪಿಸಿಎಚ್ ಅವರೊಂದಿಗೆ ಸಂವಾದ ನಡೆಸಿತು. ಕೋವಿಡ್-19 ಎರಡನೇ ಅಲೆಯ ಪರಿಣಾಮಗಳ ಬಗ್ಗೆ ಅವರು ಹೇಳಿದ್ದು ಹೀಗಿದೆ:
ಮೊದಲ ಅಲೆ ವರ್ಸಸ್ ಎರಡನೇ ಅಲೆ
ಕೋವಿಡ್-19 ಮೊದಲ ಅಲೆಯ ಸಂದರ್ಭದಲ್ಲಿ ಮಕ್ಕಳು ಸೋಂಕಿಗೆ ತುತ್ತಾಗುವಷ್ಟು ದುರ್ಬಲರಾಗಿರಲಿಲ್ಲ. ಬಹುತೇಕ ಮಕ್ಕಳು ಸೋಂಕಿನಿಂದ ಲಕ್ಷಣರಹಿತರಾಗಿದ್ದರು. ಕೆಲ ಮಕ್ಕಳು ಪಾಸಿಟಿವ್ ಆಗಿದ್ದರೂ, ಅವರ ಮನೆಯಲ್ಲಿನ ಯಾರಿಗೋ ಸೋಂಕು ತಗುಲಿದ್ದರಿಂದ ಅದು ಅವರಿಗೂ ಅಂಟಿಕೊಂಡಿತ್ತು. ಆದರೆ ಈಗ 2ನೇ ಅಲೆಯ ಸಮಯದಲ್ಲಿ ಮಕ್ಕಳು ಸಹ ಪ್ರೈಮರಿ ಪಾಸಿಟಿವ್ ಆಗುತ್ತಿದ್ದು, ಅವರಲ್ಲಿ ಸೋಂಕಿನ ಲಕ್ಷಣಗಳು ಸಹ ಕಂಡುಬರುತ್ತಿವೆ.
ಆದಾಗ್ಯೂ ಮಕ್ಕಳಲ್ಲಿನ ರೋಗಲಕ್ಷಣಗಳು ಹಾಗೂ ರೋಗ ತೀವ್ರತೆಯು ಈಗಲೂ ದೊಡ್ಡವರಲ್ಲಿ ಕಂಡುಬರುವ ಮಟ್ಟದಲ್ಲಿಲ್ಲ. 8 ವರ್ಷಕ್ಕೂ ಕೆಳಗಿನ ಹಾಗೂ ನವಜಾತ ಶಿಶುಗಳಿಗೂ ಸೋಂಕು ತಗುಲುತ್ತಿರುವುದು ಕೆಲವೆಡೆ ಕಂಡುಬರುತ್ತಿದೆ. ತಾಯಂದಿರಲ್ಲಿ ಸೋಂಕು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ, ನವಜಾತ ಶಿಶುಗಳು ಸಹ ಸೋಂಕಿಗೆ ಒಳಗಾಗುತ್ತಿವೆ. ಆದರೆ ತಾಯಿಯ ಎದೆಹಾಲಿನ ಮೂಲಕ ವೈರಸ್ ಮಗುವಿಗೆ ಹರಡುವುದಿಲ್ಲ. ಕೆಲ ಪ್ರಕರಣಗಳಲ್ಲಿ ಹೊಕ್ಕುಳ ಬಳ್ಳಿಯ ಮೂಲಕ ಮಗುವಿಗೆ ಸೋಂಕು ಹರಡಿರುವ ಬಗ್ಗೆ ತಿಳಿದು ಬಂದಿದೆ.
ಮಕ್ಕಳಲ್ಲಿ ಕಂಡುಬರುವ ಲಕ್ಷಣಗಳು
ಜ್ವರ, ಕೆಮ್ಮು, ಗಂಟಲು ನೋವು, ಶೀತ, ಅತಿಸಾರ ಮತ್ತು ವಾಂತಿಯಂತಹ ಕೆಲ ಸೋಂಕಿನ ಲಕ್ಷಣಗಳು ಕಾಣಿಸಬಹುದು. ಮಗುವಿಗೆ ಇಂಥ ಲಕ್ಷಣಗಳು ಕಂಡು ಬಂದಾಗ ಸಾಮಾನ್ಯವಾಗಿ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹೀಗೆ ಟೆಸ್ಟ್ ಮಾಡಿದಾಗ ಬಹುತೇಕ ಮಕ್ಕಳು ಕೋವಿಡ್ ಪಾಸಿಟಿವ್ ಆಗಿರುವುದು ಕಂಡು ಬರುತ್ತಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಅತಿಸಾರ ಮತ್ತು ವಾಂತಿಯ ಸಮಸ್ಯೆಗಳು ಕಂಡುಬರುತ್ತವೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಬೇಸಿಗೆಯಲ್ಲಿ ಸಹ ಮಕ್ಕಳು ಕೊರೊನಾ ವೈರಸ್ ಸೋಂಕಿನ ಪರಿಣಾಮದಿಂದ ಇಂಥ ರೋಗಲಕ್ಷಣಗಳನ್ನು ತೋರ್ಪಡಿಸುತ್ತಿದ್ದಾರೆ. ಸಾಮಾನ್ಯವಾಗಿ 10 ವರ್ಷಕ್ಕೂ ಮೇಲ್ಪಟ್ಟ ಮಕ್ಕಳಲ್ಲಿ ತಲೆನೋವು, ಮೈಕೈ ನೋವು ಮತ್ತು ದೌರ್ಬಲ್ಯದ ಲಕ್ಷಣಗಳು ಕಂಡುಬರುತ್ತಿವೆ. ಇವರು ರುಚಿ ಮತ್ತು ವಾಸನೆಯ ನಷ್ಟವನ್ನು ಸಹ ಅನುಭವಿಸಬಹುದು. ಇದೇ ಕಾರಣದಿಂದ ಈ ಮಕ್ಕಳು ಊಟ ಮಾಡಲು ನಿರಾಕರಿಸಬಹುದು.
ಸೋಂಕಿನ ತೀವ್ರತೆಯ ಮಟ್ಟ
ರೋಗಲಕ್ಷಣ ಹೊಂದಿರುವ ಹೆಚ್ಚಿನ ಮಕ್ಕಳು ಸೌಮ್ಯ ಪ್ರಮಾಣದ ಲಕ್ಷಣಗಳನ್ನು ಮಾತ್ರ ಹೊಂದಿದ್ದಾರೆ. ತೀವ್ರ ಮಟ್ಟದ ಸೋಂಕಿನ ಲಕ್ಷಣ ಹೊಂದಿರುವುದು ವಿರಳ. ಆದರೆ ಸೋಂಕಿನ ಲಕ್ಷಣವಿರುವ ಮಕ್ಕಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾ ಅಥವಾ ಬೇಡವಾ ಎಂಬುದನ್ನು ತಿಳಿಯಲು ಸೋಂಕು ಯಾವ ಪ್ರಮಾಣದಲ್ಲಿದೆ ಎಂಬುದನ್ನು ಟೆಸ್ಟ್ ಮಾಡಬೇಕಾಗುತ್ತದೆ.
- ಸೌಮ್ಯ ಕಾಯಿಲೆಯ ಮಕ್ಕಳು ಸಾಮಾನ್ಯವಾಗಿ ಜ್ವರ, ಕೆಮ್ಮು, ಗಂಟಲು ನೋವು, ವಾಂತಿ ಅಥವಾ ಅತಿಸಾರದಂಥ ಲಕ್ಷಣಗಳನ್ನು ಹೊಂದಿರಬಹುದು. ಇಲ್ಲದಿದ್ದರೆ ಇವರು ಒಟ್ಟಾರೆಯಾಗಿ ಆರೋಗ್ಯವಾಗಿದ್ದು, ಉಸಿರಾಟಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರುವುದಿಲ್ಲ.
- ಮಧ್ಯಮ ಹಂತದ ಸೋಂಕಿನ ಬಗ್ಗೆ ನೋಡುವುದಾದರೆ, ಇತರ ರೋಗಲಕ್ಷಣಗಳನ್ನು ಹೊಂದಿರುವ ಮಗು ವೇಗವಾಗಿ ಉಸಿರಾಡುತ್ತಿರಬಹುದು ಅಥವಾ ಉಸಿರಾಟದ ತೊಂದರೆ ಅನುಭವಿಸುತ್ತಿರಬಹುದು.
- ತೀವ್ರವಾದ ಸೋಂಕಿನ ಸಂದರ್ಭದಲ್ಲಿ, ಕೋವಿಡ್-19 ಪರಿಣಾಮದಿಂದ ನ್ಯುಮೋನಿಯಾ ಆಗಬಹುದು ಹಾಗೂ ಈ ಮಕ್ಕಳಲ್ಲಿ ಆಮ್ಲಜನಕದ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆಯಾಗಬಹುದು. ಹೀಗಾಗಿ ಈ ಮಕ್ಕಳು ಉಸಿರಾಟದ ತೊಂದರೆಗಳನ್ನು ತೋರ್ಪಡಿಸಬಹುದು.
ಸೋಂಕು ತಗುಲಿದ ಮಗುವನ್ನು ಆಸ್ಪತ್ರೆಗೆ ದಾಖಲಿಸುವುದು ಅಗತ್ಯವೇ?
ಕೋವಿಡ್ ಪ್ರಥಮ ಅಲೆಯ ಸಂದರ್ಭಕ್ಕೆ ಹೋಲಿಸಿದರೆ ಈಗ ಮಕ್ಕಳು ಆಸ್ಪತ್ರೆಗೆ ದಾಖಲಾಗುವುದು ಹೆಚ್ಚಾಗಿದೆ. ಆದರೆ ವಯಸ್ಕರಿಗೆ ಹೋಲಿಸಿದರೆ ಈ ಪ್ರಮಾಣ ತೀರಾ ವಿರಳವಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದರೂ ಅಂಥ ಮಕ್ಕಳು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಸೋಂಕು ತಗುಲಿದ ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡುವ ಸಂದರ್ಭಗಳು ಬಂದಿಲ್ಲ ಎನ್ನುವುದು ವೈದ್ಯರ ಮಾತಾಗಿದೆ.