ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕು ಸ್ಥಳೀಯ ಹಂತಗಳನ್ನು ತಲುಪುತ್ತಿದೆ. ಜನರು ಈ ಹಂತದಲ್ಲಿ ವೈರಾಣುವಿನೊಂದಿಗೆ ಜೀವಿಸುವುದನ್ನು ಕಲಿಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಗುಂಪು ಕೋವ್ಯಾಕ್ಸಿನ್ ಕುರಿತು ತೃಪ್ತಿದಾಯಕ ಅಭಿಪ್ರಾಯ ಹೊಂದಿದ್ದು, ಸೆಪ್ಟೆಂಬರ್ ಮಧ್ಯಭಾಗದಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದೆ. ಕೆಲವು ದಿನಗಳ ಅಧ್ಯಯನದಲ್ಲಿ ತಿಳಿದು ಬಂದ ಪ್ರಕಾರ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.
ನಾವು ಲಸಿಕೆ ವಿತರಣೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಭಾರತದ ಗಾತ್ರ, ಜನಸಂಖ್ಯೆ ವೈವಿಧ್ಯತೆ, ದೇಶದ ವಿವಿಧ ಭಾಗಗಳಲ್ಲಿನ ರೋಗ ನಿರೋಧಕ ಸ್ಥಿತಿಗಳನ್ನು ಪರಿಗಣಿಸಿದರೆ, ದೇಶದಲ್ಲಿನ ಪರಿಸ್ಥಿತಿಯಲ್ಲಿ ಏರಿಳಿತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದರು.
ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಸೋಂಕಿಗೆ ಒಳಗಾದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಈಗಿನಿಂದಲೇ ಮಕ್ಕಳ ದಾಖಲಾತಿಗಾಗಿ ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದು ಉತ್ತಮ, ಮಕ್ಕಳಲ್ಲಿ ಕಂಡುಬರುವ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಮಕ್ಕಳ ತೀವ್ರ ನಿಗಾ ಘಟಕ ಸ್ಥಾಪಿಸುವುದು ಉತ್ತಮ ಎಂದು ಸೌಮ್ಯ ಸ್ವಾಮಿನಾಥನ್ ಸಲಹೆ ನೀಡಿದ್ದಾರೆ.