ಹೈದರಾಬಾದ್: ಕೋವ್ಯಾಕ್ಸಿನ್ ಕೋವಿಡ್-19 ಲಸಿಕೆಯು ಸಂಪೂರ್ಣ ಸುರಕ್ಷಿತ, ಉತ್ತಮವಾಗಿ ಸೋಂಕು ತಡೆಗಟ್ಟಬಲ್ಲ ಹಾಗೂ ಚಿಕ್ಕ ಮಕ್ಕಳ ವಿಷಯದಲ್ಲಿ ಅತಿ ಹೆಚ್ಚು ಇಮ್ಯುನೋಜೆನಿಕ್ ಆಗಿರುವುದಾಗಿ 2 ಹಾಗೂ 3ನೇ ಹಂತದ ಅಧ್ಯಯನಗಳಲ್ಲಿ ಸಾಬೀತಾಗಿದೆ ಎಂದು ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಹೇಳಿದೆ. ಈ ಕುರಿತಾದ ಸಂಶೋಧನಾ ವರದಿಯನ್ನು ಲ್ಯಾನ್ಸೆಟ್ ಜರ್ನಲ್ ಒಪ್ಪಿಕೊಂಡಿರುವುದಾಗಿ ಹಾಗೂ ಜರ್ನಲ್ನಲ್ಲಿ ವರದಿ ಪ್ರಕಟವಾಗಿರುವುದಾಗಿ ಸಂಸ್ಥೆ ತಿಳಿಸಿದೆ.
ಭಾರತ್ ಬಯೋಟೆಕ್ ಸಂಸ್ಥೆಯು 2 ಹಾಗೂ 3ನೇ ಹಂತದಲ್ಲಿ 2 ರಿಂದ 18 ವಯೋಮಾನದ ಮಕ್ಕಳಲ್ಲಿ ಲಸಿಕೆಯನ್ನು ಪ್ರಯೋಗಕ್ಕೆ ಒಳಪಡಿಸಿದೆ. ಕೋವ್ಯಾಕ್ಸಿನ್ ಲಸಿಕೆಯು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಜೂನ್ 2021 ಮತ್ತು ಸೆಪ್ಟೆಂಬರ್ 2021 ರ ನಡುವೆ ನಡೆಸಲಾದ ಕ್ಲಿನಿಕಲ್ ಟ್ರಯಲ್ಸ್ಗಳಲ್ಲಿ ತಿಳಿದು ಬಂದಿದೆ.
ಈ ಕುರಿತು ಮಾತನಾಡಿದ ಸಂಸ್ಥೆಯ ಚೇರ್‌ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ಎಲ್ಲಾ, "ಲಸಿಕೆಯು ಮಕ್ಕಳಿಗೆ ಸಂಪೂರ್ಣ ಸುರಕ್ಷಿತವಾಗಿರಬೇಕಾಗಿರುವುದು ಬಹಳ ಮುಖ್ಯ. ಅದರಂತೆ ಈಗ ಕೋವ್ಯಾಕ್ಸಿನ್ ಮಕ್ಕಳಿಗೆ ಸಂಪೂರ್ಣ ಸುರಕ್ಷಿತ ಎಂಬುದು ಮಾಹಿತಿಸಮೇತ ಸಾಬೀತಾಗಿದೆ. ಮಕ್ಕಳು ಹಾಗೂ ದೊಡ್ಡವರು ಇಬ್ಬರಿಗೂ ಸುರಕ್ಷಿತ ಹಾಗೂ ಪರಿಣಾಮಕಾರಿಯಾದ ಕೋವಿಡ್ ಲಸಿಕೆ ತಯಾರಿಸುವಲ್ಲಿ ನಾವು ಸಫಲರಾಗಿದ್ದೇವೆ. ಕೋವ್ಯಾಕ್ಸಿನ್ ಅನ್ನು ಜಾಗತಿಕ ಲಸಿಕೆಯನ್ನಾಗಿ ಮಾಡುವುದರತ್ತ ನಾವು ಸಾಗುತ್ತಿದ್ದೇವೆ. ಭಾರತದಲ್ಲಿ ಮಕ್ಕಳಿಗೆ 50 ಮಿಲಿಯನ್ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದ್ದು, ಇದು ಸಂಪೂರ್ಣ ಸುರಕ್ಷಿತ ಎಂದು ಸಾಬೀತಾಗಿದೆ. ಕೋವಿಡ್-19 ತಡೆಗಟ್ಟುವಲ್ಲಿ ಲಸಿಕೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ." ಎಂದು ಹೇಳಿದರು.
ಅಧ್ಯಯನದ ಸಂದರ್ಭಗಳಲ್ಲಿ ಲಸಿಕೆಯ ಯಾವುದೇ ಗಂಭೀರ ಪ್ರತಿಕೂಲ ಪರಿಣಾಮಗಳು ಕಂಡು ಬಂದಿಲ್ಲ. 374 ಪ್ರಕರಣಗಳಲ್ಲಿ ಪ್ರತಿಕೂಲ ಪರಿಣಾಮಗಳು ಕಂಡುಬಂದಿದ್ದು, ಅವೆಲ್ಲವೂ ಸೌಮ್ಯ ಸ್ವರೂಪದ್ದಾಗಿದ್ದವು ಹಾಗೂ ಅವೆಲ್ಲವನ್ನು ಒಂದೇ ದಿನದಲ್ಲಿ ಗುಣಪಡಿಸಲಾಯಿತು. ಇನ್ನು ಬಹುತೇಕ ಪ್ರತಿಕೂಲ ಪರಿಣಾಮಗಳು ಇಂಜೆಕ್ಷನ್ ಮಾಡಿದ ಜಾಗದಲ್ಲಿ ನೋವಾಗುವ ಪರಿಣಾಮ ಹೊಂದಿದ್ದವು.