ರಾಂಚಿ (ಜಾರ್ಖಂಡ್): ಜಾರ್ಖಂಡ್ ರಾಜ್ಯದಲ್ಲಿ ಸಿಎಂ ಹೇಮಂತ್ ಸೊರೇನ್ ನೇತೃತ್ವದ ರಾಜ್ಯ ಸರ್ಕಾರ ಹಲವು ಶಾಲೆಗಳಿಗೆ ಮರುನಾಮಕರಣ ಮಾಡಿರುವ ವಿವಾದ ಭುಗಿಲೆದ್ದಿದೆ. ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಪ್ರಾರಂಭಿಸಲಾದ ಸಿಎಂ ಸ್ಕೂಲ್ ಆಫ್ ಎಕ್ಸಲೆನ್ಸ್ ಯೋಜನೆಯಡಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ ಇತ್ತೀಚಿನ ಆದೇಶದ ಪ್ರಕಾರ, ಆಯ್ದ 80 ಶಾಲೆಗಳ ಹೆಸರನ್ನು ಬದಲಾಯಿಸಲಾಗಿದೆ. ಮರುನಾಮಕರಣ ಯೋಜನೆಗೆ ಲೋಹರ್ದಗಾದಲ್ಲಿರುವ ನಾಡಿಯಾ ಹಿಂದೂ ಹೈಸ್ಕೂಲ್ ಮತ್ತು ಚಾಸ್‌ನಲ್ಲಿರುವ ರಾಮ್ ರುದ್ರ +2 ಹೈಸ್ಕೂಲ್ ಶಿಕ್ಷಣ ಸಂಸ್ಥೆಗಳು ವಿರೋಧ ವ್ಯಕ್ತಪಡಿಸುತ್ತಿವೆ.
ವಿರೋಧಕ್ಕೆ ಏನು ಕಾರಣ?: ರಾಜ್ಯ ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ನಾಡಿಯಾ ಹಿಂದೂ ಹೈಸ್ಕೂಲ್‌ನಿಂದ 'ಹಿಂದೂ' ಪದ ತೆಗೆದು ಹಾಕಲಾಗಿದೆ. ಶಾಲೆಗೆ ಜಿಲ್ಲಾ ಸಿಎಂ ಸ್ಕೂಲ್ ಆಫ್ ಎಕ್ಸಲೆನ್ಸ್, ಲೋಹರ್ಡಗಾ ಎಂದು ಮರುನಾಮಕರಣ ಮಾಡಲಾಗಿದೆ. ಅದೇ ರೀತಿ, ಬೊಕಾರೊದ ಚಾಸ್‌ನಲ್ಲಿರುವ ರಾಮ್ ರುದ್ರ +2 ಹೈಸ್ಕೂಲ್‌ನಿಂದ 'ರಾಮ್ ರುದ್ರ' ಪದ ಕೈಬಿಡಲಾಗಿದೆ. ಧನಬಾದ್‌ನ SSLNT ಸರ್ಕಾರಿ ಬಾಲಕಿಯರ +2 ಶಾಲೆಯಿಂದ 'SSLNT' (ಶ್ರೀ ಶ್ರೀ ಲಕ್ಷ್ಮೀ ನಾರಾಯಣ ಟ್ರಸ್ಟ್) ಪದವನ್ನು ಕೈಬಿಡಲಾಗಿದೆ. ಮೊದಲಿನಿಂದ ಇದ್ದ ಈ ಹೆಸರನ್ನು ಮರುನಾಮಕರಣ ಸಂದರ್ಭದಲ್ಲಿ ಕೈ ಬಿಟ್ಟಿರುವುದೇ ಈ ವಿವಾದಕ್ಕೆ ಕಾರಣವಾಗಿದೆ.
ನಾಡಿಯಾ ಹಿಂದೂ ಹೈಸ್ಕೂಲ್ ಆಫ್ ಲೋಹರ್ದಗಾವನ್ನು 1931 ರಲ್ಲಿ ಸ್ಥಾಪಿಸಲಾಗಿತ್ತು. ಭಾರತವು ಸ್ವಾತಂತ್ರ್ಯ ಪಡೆಯುವ ಮೊದಲೇ ಭೂಮಿಯ ಮಾಲೀಕ ಘನಶ್ಯಾಮ್ ದಾಸ್ ಬಿರ್ಲಾ ಅವರು ಈ ಶಾಲೆ ನಿರ್ಮಿಸಲು ತಮ್ಮ ಭೂಮಿ ದಾನ ಮಾಡಿದ್ದರು. ನಂತರ ಇದನ್ನು ಬಿಹಾರ ಸರ್ಕಾರವು ಸ್ವಾಧೀನಪಡಿಸಿಕೊಂಡಿತು. ಆ ಸಮಯದಲ್ಲೂ ಬಿರ್ಲಾ ಅವರು ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತೇವೆ, ಆದರೆ ಶಾಲೆಯ ಹೆಸರು ನಾಡಿಯಾ ಹಿಂದೂ ಹೈಸ್ಕೂಲ್ ಆಗಿಯೇ ಉಳಿಯಬೇಕು ಎಂದು ಷರತ್ತು ಹಾಕಿದ್ದರು. ಆದರೆ ಈಗಿನ ಸರ್ಕಾರ ಷರತ್ತು ತಪ್ಪಿದೆ.
ಇನ್ನು ಜಾರ್ಖಂಡ್ ಸರ್ಕಾರದ ನಿರ್ಧಾರವನ್ನು ಮಾಜಿ ಕೇಂದ್ರ ಸಚಿವ ಮತ್ತು ಲೋಹರ್ದಗಾ ಸಂಸದ ಸುದರ್ಶನ್ ಭಗತ್ ವಿರೋಧಿಸಿದ್ದಾರೆ. ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ ತಪ್ಪಾಗಿದ್ದು, ತುಷ್ಟೀಕರಣ ರಾಜಕಾರಣದ ಪರಮಾವಧಿ ಎಂದು ಆರೋಪಿಸಿದ್ದಾರೆ. ಶಿಕ್ಷಣ ತಜ್ಞ ಮದನ್ ಮೋಹನ್ ಪಾಂಡೆ ಅವರು ಭೂಮಿಯನ್ನು ದಾನ ಮಾಡುವಾಗ, ಬಿರ್ಲಾ ಶಾಲೆಯ ಹೆಸರು ಶಾಶ್ವತವಾಗಿ ನಾಡಿಯಾ ಹಿಂದೂ ಹೈಸ್ಕೂಲ್ ಆಗಿ ಉಳಿಯುತ್ತದೆ ಎಂದು ಷರತ್ತು ಹಾಕಿದ್ದರು.
ಆದರೆ ಈಗ ಸರ್ಕಾರ ಮಾತು ತಪ್ಪಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಶಾಲಾ ಕಟ್ಟಡ ನಿರ್ಮಾಣಕ್ಕೆ ರಾಯ್ ಸಾಹೇಬ್ ಬಲದೇವ್ ಸಾಹು, ಶ್ರೀ ಕೃಷ್ಣ ಸಾಹು ಮತ್ತು ಮನು ಬಾಬು ಸೇರಿದಂತೆ ಅನೇಕರು ಜನರು ಆರ್ಥಿಕ ಸಹಾಯ ಮಾಡಿದ್ದರು. ರಾಜ್ಯ ಸರ್ಕಾರ ಈಗ ಶಾಲೆಯಿಂದ 'ಹಿಂದೂ' ಪದವನ್ನು ತೆಗೆದುಹಾಕುವುದು ಸಂಪೂರ್ಣವಾಗಿ ತಪ್ಪು ಎಂದಿದ್ದಾರೆ.
ಮರುನಾಮಕರಣಗೊಂಡ ಇತರ ಶಾಲೆಗಳು: ಆರ್.ಕೆ. +2 ಗರ್ಲ್ಸ್ ಸ್ಕೂಲ್ ಗರ್ಹ್ವಾ, C.D. ಬಾಲಕಿಯರ ಶಾಲೆ, ಜುಮ್ರಿ ತಿಲಯ್ಯಾ; ಎಸ್.ಎಸ್. ಬಾಲಕಿಯರ ಪ್ರೌಢಶಾಲೆ, ರಾಮಗಢ ಕ್ಯಾಂಟ್; ಮತ್ತು ಜಿಲಾ ಶಾಲೆ, ಹಜಾರಿಬಾಗ್.
ಇದನ್ನೂ ಓದಿ: ದಾವೂದ್ ಜೊತೆ ನಂಟು ಹೊಂದಿದ್ದವರ ಹಣ ಭಯೋತ್ಪಾದನೆಗೆ ಬಳಕೆ: ಮುಂಬೈ ಪೊಲೀಸರು