ಚೆನ್ನೈ (ತಮಿಳುನಾಡು): ಇಲ್ಲಿನ ಆರ್‌ಎ ಪುರಂನಲ್ಲಿ ಅಕ್ರಮವಾಗಿ ಜಾಗ ಒತ್ತುವರಿ ಮಾಡಿಕೊಂಡು ವಾಸ ಮಾಡುತ್ತಿರುವ ನೂರಕ್ಕೂ ಹೆಚ್ಚು ನಿವಾಸಿಗಳ ತೆರವು ಕಾರ್ಯಾಚರಣೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಇದು ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿದೆ.
ಚೆನ್ನೈನ ರಾಜಾ ಆರ್‌ಎ ಪುರಂನ ಇಳಂಗೋ ಬೀದಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳು ಅಕ್ರಮವಾಗಿ ತಲೆ ಎತ್ತಿವೆ. ಕಳೆದ ಒಂದು ವಾರದಿಂದ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನೆಗಳನ್ನು ತೆರವು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಬಿಗಿ ಭದ್ರತೆ ನೀಡಿದೆ. ತೆರವು ಪ್ರಕ್ರಿಯೆ ಆರಂಭವಾದ ಬಳಿಕ ಒತ್ತುವರಿ ತೆರವು ವಿರೋಧಿಸಿ ಜನರು ಪ್ರತಿಭಟಿಸುತ್ತಿದ್ದರು.
ಪ್ರತಿಭಟನೆಯ ವೇಳೆ ಕನ್ನಯ್ಯನ್ (55) ಎಂಬುವರು ತೆರವು ಕಾರ್ಯಾಚರಣೆ ವಿರುದ್ಧ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದರು. ತಕ್ಷಣವೇ ಅವರನ್ನು ಪೊಲೀಸರು ಹಾಗೂ ಸಾರ್ವಜನಿಕರು ರಕ್ಷಿಸಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆಯಿಂದ ಅಧಿಕಾರಿಗಳು ಹಾಗೂ ನಿವಾಸಿಗಳ ನಡುವೆ ಭಾರೀ ವಾಗ್ವಾದ ನಡೆದಿತ್ತು. ಇದಕ್ಕಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇತ್ತ ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿಗೆ ದೇಹದ ಶೇ.90ರಷ್ಟು ಭಾಗ ಸುಟ್ಟ ಗಾಯಗಳಾಗಿವೆ. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕನ್ನಯ್ಯನ್ ಇಂದು (ಮೇ 9) ಸಾವನ್ನಪ್ಪಿದ್ದಾನೆ. ಕನ್ನಯ್ಯನ್ ಪಿಎಂಕೆ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಇದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ತಮಿಳುನಾಡು ಸರ್ಕಾರ ಮೃತಪಟ್ಟ ಕನ್ನಯ್ಯನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ.
ಓದಿ: ಧೋತಿ-ಕುರ್ತಾ ಬದಲು ಶೇರ್ವಾನಿ ಧರಿಸಿದ ವರ : ರಣರಂಗವಾಯ್ತು ಮದುವೆ ಮನೆ