ನವದೆಹಲಿ: 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ ಅವರ ಪತ್ನಿ ಲೀನಾ ಮರಿಯಾ ಪೌಲೋಸ್ ಸಲ್ಲಿಸಿದ್ದ ಜಾಮೀನು ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಸೋಮವಾರ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ದಾಖಲಿಸಿದ ಪ್ರಕರಣದಲ್ಲಿ ಜಾಮೀನು ಕೋರಿ ಡಿಸೆಂಬರ್ 10 ರಂದು ಪೌಲೋಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ, 2023 ರ ಜನವರಿಯಲ್ಲಿ ಮುಂದಿನ ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿದ್ದು, ಆರು ವಾರಗಳ ಒಳಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದರು. ಇಒಡಬ್ಲ್ಯು ಕಳೆದ ವರ್ಷ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.
ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಮಕೋಕಾ) (ಎಂಸಿಒಸಿಎ)ಯ ನಿಬಂಧನೆಗಳ ಅಡಿಯಲ್ಲಿ ಚಂದ್ರಶೇಖರ್, ಪೌಲೋಸ್, ಮಲ್ವಿಂದರ್ ಸಿಂಗ್ ಮತ್ತು ಇತರ 14 ಆರೋಪಿಗಳನ್ನು ಹೆಸರಿಸಿ ಇಒಡಬ್ಲ್ಯು ಚಾರ್ಜ್ ಶೀಟ್ ಸಲ್ಲಿಸಿದೆ.
ಚಂದ್ರಶೇಖರ್ ಈತ ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರಾದ ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಪತ್ನಿಯರಿಗೆ 200 ಕೋಟಿ ರೂಪಾಯಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿ ಎಂದು ಹೇಳಿಕೊಂಡು ಅವರ ಪತಿಯಂದಿರಿಗೆ ಜಾಮೀನು ನೀಡುವುದಾಗಿ ಭರವಸೆ ನೀಡಿ ಅವರ ಪತ್ನಿಯರಾದ ಅದಿತಿ ಸಿಂಗ್ ಮತ್ತು ಜಪ್ನಾ ಸಿಂಗ್ ಅವರಿಂದ ಹಲವಾರು ಕೋಟಿ ರೂಪಾಯಿ ಪಡೆದು ವಂಚನೆ ಮಾಡಿದ್ದ.
ಇಒಡಬ್ಲ್ಯು ಪ್ರಕಾರ ಲೀನಾ, ಸುಕೇಶ್ ಮತ್ತು ಇತರರು ವಂಚನೆಯಿಂದ ಗಳಿಸಿದ ಹಣವನ್ನು ಸಂಗ್ರಹ ಮಾಡಲು ಮಾಡಲು ಶೆಲ್ ಕಂಪನಿಗಳನ್ನು ರಚಿಸಿದ್ದಾರೆ ಮತ್ತು ಇದಕ್ಕಾಗಿ ಹವಾಲಾ ಮಾರ್ಗಗಳನ್ನು ಬಳಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ವಂಚಕ ಸುಕೇಶ್ ಪ್ರಕರಣ: ಇಡಿ ಮುಂದೆ ಹಾಜರಾದ ನಟಿ ನೋರಾ ಫತೇಹಿ