ನವದೆಹಲಿ: ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಕರವಾಗುವ 138 ಬೆಟ್ಟಿಂಗ್ ಮತ್ತು 94 ಲೋನ್ ಕೊಡುವ ಆ್ಯಪ್‌ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕ್ರಮವನ್ನು ತುರ್ತಾಗಿ ಕೈಗೊಳ್ಳುವಂತೆ ಗೃಹ ವ್ಯವಹಾರಗಳ ಸಚಿವಾಲಯ (MHA) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಶಿಫಾರಸುಗಳ ಮಾಡಿದೆ ಎನ್ನಲಾಗಿದ್ದು, ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 69 ಅಡಿಯಲ್ಲಿ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಕರವಾಗುವ ತಂತ್ರಾಂಶಗಳನ್ನು ನಿಷೇಧಿಸಲು ಮುಂದಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಣ್ಣ ಪ್ರಮಾಣದ ಸಾಲವನ್ನು ಪಡೆದ ಸಾಮಾನ್ಯ ಜನರ ಸುಲಿಗೆ ಮತ್ತು ಕಿರುಕುಳದ ಹಲವಾರು ದೂರುಗಳನ್ನು ಆಧರಿಸಿ ಈ ನಿರ್ಧಾರವನ್ನು ಮಾಡಲಾಗಿದೆ. ಈ ಆ್ಯಪ್‌ಗಳು ಭಾರತೀಯರನ್ನು ನೇಮಿಸಿಕೊಂಡು ಅವರಲ್ಲಿ ಚೀನಿ ವಿಚಾರಗಳನ್ನು ತುಂಬಲಾಗುತ್ತಿದೆ ಎಂದು ಹೇಳಲಾಗ್ತಿದೆ. ಹತಾಶೆಯಲ್ಲಿ ಮತ್ತು ಹಣದ ಅಗತ್ಯ ಹೆಚ್ಚಿರುವ ವ್ಯಕ್ತಿಗಳನ್ನು ಗುರಿಯಾಗಿಸಿ ಸಾಲ ನೀಡಿ ನಂತರ ಸುಮಾರು 3,000 ಪಟ್ಟು ಬಡ್ಡಿ ವಿಧಿಸುತ್ತಾರೆ.
ಸಾಲಗಾರರು ಬಡ್ಡಿಯನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ ಅಪ್ಲಿಕೇಶನ್‌ಗಳ ಮೂಲಕ ಸಾಲ ಪಡೆದವರಿಗೆ ಕಿರುಕುಳ ನೀಡಲಾಗುತ್ತದೆ. ಸಾಲ ತೆಗೆದುಕೊಂಡವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು ಮತ್ತು ಅವರ ಮಾರ್ಫ್ ಮಾಡಿದ ಫೋಟೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕುವುದನ್ನು ಮಾಡುತ್ತಾರೆ. ಅಲ್ಲದೇ ಸಾಲಗಾರರ ಮೊಬೈಲ್ನಲ್ಲಿರುವ ಕಾಂಟಾಕ್ಟ್ಅನ್ನು ಬಳಸಿಕೊಂಡು ಸ್ನೇಹಿತರು ಮತ್ತು ಸಂಬಂಧಿಕರಿಗೆ ನಿಮ್ಮ ಅಶ್ಲೀಲ ಫೋಟೋ ಕಳಿಸುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇಂತಹ ಸಾಲಗಳನ್ನು ತೆಗೆದುಕೊಂಡು ಅಥವಾ ಬೆಟ್ಟಿಂಗ್ ಆ್ಯಪ್ಗಳನ್ನು ಬಳಸಿ ಹಣ ಕಳೆದುಕೊಂಡವರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿವೆ. ತೆಲಂಗಾಣ, ಒಡಿಶಾ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಈ ಅಪ್ಲಿಕೇಶನ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದವು ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ಗೆ ಅಕ್ರಮ ಸಾಲದ ಆ್ಯಪ್‌ಗಳ ಹಾವಳಿಯನ್ನು ತಡೆಯಲು ಸಾಲದ ಆ್ಯಪ್‌ಗಳ 'ವೈಟ್‌ಲಿಸ್ಟ್' ಅನ್ನು ಸಿದ್ಧಪಡಿಸುವಂತೆ ತಿಳಿಸಿದ್ದರು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MEITY) ಅಂತಹ ಅಪ್ಲಿಕೇಶನ್‌ಗಳ ಬಗ್ಗೆ ಮಾಹಿತಿ ಕಲೆಹಾಕಿತ್ತು.
ಗೃಹ ವ್ಯವಹಾರಗಳ ಸಚಿವಾಲಯ ಆರು ತಿಂಗಳ ಹಿಂದೆ 28 ಚೀನಿ ಮೂಲದ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ವಿಶ್ಲೇಷಿಸಲು ಪ್ರಾರಂಭಿಸಿತ್ತು. ಇ-ಸ್ಟೋರ್‌ಗಳಲ್ಲಿ 94 ಅಪ್ಲಿಕೇಶನ್‌ಗಳ ಲಭ್ಯತೆ ಮತ್ತು ಇತರರು ಮೂರನೇ ವ್ಯಕ್ತಿಯ ಲಿಂಕ್‌ಗಳ ಮೂಲಕ ಹಲವಾರು ಆ್ಯಪ್‌ಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಲು ಹಲವು ಅಪ್ಲಿಕೇಶನ್‌ಗಳು ಈಗ ಲಭ್ಯವಿಲ್ಲ. ಆದರೆ ಮೂಲಗಳು ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಲಿಂಕ್ ಮತ್ತು ಆನ್ಲೈನ್ ಗೇಮಿಂಗ್ ಸಂಪರ್ಕ ಹಾಗೂ ವೆಬ್‌ಸೈಟ್‌ಗಳ ಮೂಲಕ ಡೌನ್‌ಲೋಡ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB)ದ ಪ್ರಕಾರ ದೇಶದ ಹೆಚ್ಚಿನ ಭಾಗಗಳಲ್ಲಿ ಬೆಟ್ಟಿಂಗ್ ಮತ್ತು ಜೂಜಾಟ ಕಾನೂನುಬಾಹಿರ ಚಟವಟಿಕೆಯಾಗಿದೆ. ಹೀಗಾಗಿ ಈ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಜಾಹೀರಾತುಗಳು ಮತ್ತು ಬೇರೆ ರೀತಿಯಲ್ಲಿ ಪ್ರಚಾರ ಮಾಡುವುದು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಮತ್ತು ಕೇಬಲ್ ಟಿವಿ ನೆಟ್‌ವರ್ಕ್ ನಿಯಂತ್ರಣ ಕಾಯ್ದೆ 1995 ಮತ್ತು ಐಟಿ ನಿಯಮಗಳು 2021 ರ ಪ್ರಕಾರ ಕಾನೂನು ಬಾಹಿರವಾಗಿದೆ.
ಇದನ್ನೂ ಓದಿ: ಹೆಲ್ಮೆಟ್ ಧರಿಸಲು ನಿರಾಕರಿಸಿದ ಓಲಾ ಬೈಕ್ ಚಾಲಕ; ಸಂಸ್ಥೆಗೆ ಪೊಲೀಸ್ ನೋಟಿಸ್