ನವದೆಹಲಿ: ಇಂಧನ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯ ಸಾಕಷ್ಟು ಏರಿಕೆ ಕಂಡಿದ್ದು, ಜೀವನ ರೂಪಿಸಿಕೊಳ್ಳುವ ಸಲುವಾಗಿ ಸಾಮಾನ್ಯ ಜನರಿಗೆ ಸಾಲ ವಿತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ಮತ್ತೆ ಏರಿಕೆ ಮಾಡಿದೆ. ಈ ಮೂಲಕ ಸಾಮಾನ್ಯ ಜನರ ಗಾಯಕ್ಕೆ ಉಪ್ಪು ಸವರುವ ಪ್ರಯತ್ನವನ್ನು ಕೇಂದ್ರ ಮಾಡುತ್ತಿದೆ. ಇದು ಸರಿಯಲ್ಲ ಮತ್ತು ಅನೈತಿಕ ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾರ್ಚ್ 2021 ರಲ್ಲಿ ಸೌದಿ ಅರೇಬಿಯನ್ ತೈಲ ಕಂಪನಿಯಲ್ಲಿ(ಅರಾಮ್ಕೊ) ಎಲ್‌ಪಿಜಿ ಬೆಲೆ ಮೆಟ್ರಿಕ್ ಟನ್ಗೆ 587 ಡಾಲರ್ ಇತ್ತು. ಆ ಸಮಯದಲ್ಲಿ, ನಮ್ಮಲ್ಲಿ ಎಲ್‌ಪಿಜಿ ಬೆಲೆ 819 ರೂಪಾಯಿ ಆಗಿತ್ತು. ಇಂದು, ಸೌದಿ ಅರೇಬಿಯನ್ ತೈಲ ಕಂಪನಿಯಲ್ಲಿ ಎಲ್‌ಪಿಜಿ ಬೆಲೆ ಮೆಟ್ರಿಕ್ ಟನ್ಗೆ 523 ಡಾಲರ್ ಆಗಿದೆ. ಈ ಬೆಲೆಗೆ ಹೋಲಿಸಿದರೆ ಭಾರತದಲ್ಲಿ ಎಲ್‌ಪಿಜಿ ಬೆಲೆ 552 ರೂಪಾಯಿ ಆಗಿರಬೇಕು. ಆದರೆ ಈಗ ಒಂದು ಸಿಲಿಂಡರ್ಗೆ 834 ರೂಪಾಯಿ ನೀಡಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೋಟ್ಯಂತರ ರೂಪಾಯಿ ವಸೂಲಿ ಆರೋಪ: ಸಚಿವ ಶ್ರೀರಾಮುಲು ಆಪ್ತ ಸಹಾಯಕ ಅರೆಸ್ಟ್
ಕಳೆದ 7 ತಿಂಗಳಲ್ಲಿ ಎಲ್‌ಪಿಜಿ ಬೆಲೆಯನ್ನು 240 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂದು ಸುಪ್ರಿಯಾ ಶ್ರೀನೇತ್ ಹೇಳಿದ್ದು, ಆದಷ್ಟು ಬೇಗ ಎಲ್‌ಪಿಜಿ ಬೆಲೆಯನ್ನು ಕಡಿಮೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ದೇಶದಲ್ಲಿ 29 ಕೋಟಿ ಎಲ್‌ಪಿಜಿ ಬಳಕೆದಾರರಿದ್ದಾರೆ. ಆದರೆ ಈಗ ಉಜ್ವಲಾ ಫಲಾನುಭವಿಗಳೂ ಸಿಲಿಂಡರ್ ಪಡೆಯಲು ಸಾಧ್ಯವಾಗುತ್ತಿಲ್ಲ. ಮೂರು ಕೋಟಿ ಮಂದಿ ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಟ್ಟಿದ್ದಾರೆ. 1 ಕೋಟಿ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಜಿಡಿಪಿ ಕುಂಠಿತಗೊಂಡಿದೆ ಎಂದು ಶ್ರೀನೇತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.