ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಭಾನುವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 50 ಲಕ್ಷ ರೂಪಾಯಿ ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೆಯ ಹೆಚ್ಚುವರಿ ವಿಭಾಗೀಯ ರೈಲ್ವೆ ಮ್ಯಾನೇಜರ್ (ಎಡಿಆರ್ಎಂ) ಮತ್ತು ಓರ್ವ ಹವಾಲಾ ಆಪರೇಟರ್ ಸೇರಿದಂತೆ ಏಳು ಜನ ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಎಡಿಆರ್ಎಂ ಜಿತೇಂದ್ರ ಪಾಲ್ ಸಿಂಗ್, ಶ್ಯಾಮಲ್ ಕುಮಾರ್ ದೇಬ್, ಹರಿಓಂ, ಯೋಗೇಂದ್ರ ಕುಮಾರ್ ಸಿಂಗ್, ದಿಲಾವರ್ ಖಾನ್, ವಿನೋದ್ ಕುಮಾರ್ ಸಿಂಘಾಲ್ ಅಲಿಯಾಸ್ ಮುಖೇಶ್ ಮತ್ತು ಸಂಜೀತ್ ರೇ ಎಂದು ಗುರುತಿಸಲಾಗಿದೆ. ಎಡಿಆರ್ಎಂ ಜಿತೇಂದ್ರ ಪಾಲ್ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಈ ಎಲ್ಲ ಆರೋಪಿಗಳ ವಿರುದ್ಧ ಲಂಚದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳ ಹಿನ್ನೆಲೆ: ಅಸ್ಸೋಂ ರಾಜಧಾನಿ ಗುವಾಹಟಿಯಲ್ಲಿ ರೈಲ್ವೆಯ ಹೆಚ್ಚುವರಿ ವಿಭಾಗೀಯ ರೈಲ್ವೆ ಮ್ಯಾನೇಜರ್ ಜಿತೇಂದ್ರ ಪಾಲ್ ಸಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದರು. ಶ್ಯಾಮಲ್ ಕುಮಾರ್ ದೇಬ್ ಹಣದ ವ್ಯವಸ್ಥೆ ಮಾಡಿದ ಗುತ್ತಿಗೆದಾರನಾಗಿದ್ದಾನೆ. ಹರಿಓಂ ಸರ್ಕಾರಿ ಅಧಿಕಾರಿಗಳನ್ನು ಪರಿಚಯಿಸಿದ ಮಧ್ಯಸ್ಥಿಕೆದಾರನಾಗಿದ್ದು, ಯೋಗೇಂದ್ರ ಕುಮಾರ್ ಸಿಂಗ್ ಈತನ ಕಾರು ಚಾಲಕನಾಗಿದ್ದಾನೆ. ವಿನೋದ್ ಕುಮಾರ್ ಸಿಂಘಾಲ್ ಅಲಿಯಾಸ್ ಮುಖೇಶ್ ಹವಾಲಾ ಅಂಗಡಿಯ ಮಾಲೀಕನಾಗಿದ್ದು, ದಿಲಾವರ್ ಖಾನ್ ಹವಾಲಾ ಅಂಗಡಿಯ ಕ್ಯಾಷಿಯರ್ ಹಾಗೂ ಸಂಜೀತ್ ರೇ ಹವಾಲಾ ಆಪರೇಟರ್ ಆಗಿದ್ದಾನೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಗುತ್ತಿಗೆ ಬಿಲ್ ಎತ್ತಲು ಲಂಚ ಮತ್ತು ಸಂಚು: ಈಶಾನ್ಯ ಗಡಿನಾಡು ರೈಲ್ವೆ (ಎನ್ಎಫ್ಆರ್) ವಲಯದಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಖಾಸಗಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಸಂಚಿನಲ್ಲಿ ಆರೋಪಿಗಳು ತೊಡಗಿದ್ದರು. ಕಾಮಗಾರಿ ಗುತ್ತಿಗೆಗೆ ಕುರಿತಾದ ಭದ್ರತಾ ಠೇವಣಿ ಮತ್ತು ಬ್ಯಾಂಕ್ ಗ್ಯಾರಂಟಿಯಿಂದ ಹಿಡಿದು ಗುತ್ತಿಗೆ ಒಪ್ಪಂದ, ಮಾಪನ ಪುಸ್ತಕ ಸಿದ್ಧಪಡಿಸುವುದು, ಚಾಲ್ತಿ ಖಾತೆ ಬಿಲ್ಗಳ ಪ್ರಕ್ರಿಯೆ, ಬಾಕಿ ಇರುವ ಬಿಲ್ಗಳ ಪಾವತಿಯವರೆಗೂ ಖಾಸಗಿ ಗುತ್ತಿಗೆದಾರರಿಗೆ ಕೃಪಾಕಟಾಕ್ಷ ವಹಿಸುತ್ತಿದ್ದರು.
ಎನ್ಎಫ್ಆರ್ ವಲಯದ ನ್ಯೂ ಜಲ್ಪೈಗುರಿಯಲ್ಲಿ ಮುಖ್ಯ ಇಂಜಿನಿಯರ್ ಆಗಿ ನೇಮಕಗೊಂಡಿದ್ದ ಜಿತೇಂದ್ರ ಪಾಲ್ ಸಿಂಗ್ ವಿವಿಧ ಗುತ್ತಿಗೆದಾರರಿಂದ ಅನಗತ್ಯ ಲಾಭವನ್ನು ಕೇಳುವುದು ಹಾಗೂ ಸ್ವೀಕರಿಸುವುದು ವಾಡಿಕೆಯಾಗಿತ್ತು. ದೆಹಲಿಯಲ್ಲಿ ಹವಾಲಾ ಆಪರೇಟರ್ ಆಗಿದ್ದ ಸಂಜೀತ್ ರೇನಿಂದ ಮಧ್ಯಸ್ಥಿಕೆದಾರ ಹರಿಓಂ ಮೂಲಕ ಅಧಿಕಾರಿ ಜಿತೇಂದ್ರ ಪಾಲ್ ಸಿಂಗ್ ಅವರಿಗೆ ಗುತ್ತಿಗೆದಾರ ಶ್ಯಾಮಲ್ ಕುಮಾರ್ ದೇಬ್ ಲಂಚ ಹಣವನ್ನು ತಲುಪಿಸುತ್ತಿದ್ದ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಆರೋಪಿಗಳು ಸಿಬಿಐ ಬಲೆಗೆ ಬಿದ್ದಿದ್ದು ಹೇಗೆ?: ಎಡಿಆರ್ಎಂ ಜಿತೇಂದ್ರ ಪಾಲ್ ಪರವಾಗಿ ಯಾರೋ 50 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾರೆ ಎಂದ ಮಾಹಿತಿ ಸಿಬಿಐ ಮಾಹಿತಿ ಸಿಕ್ಕಿತ್ತು. ಅಂತೆಯೇ, ಸಿಬಿಐ ಅಧಿಕಾರಿಗಳು ಬಲೆ ಬೀಸಿ ತಮ್ಮ ಕಾರ್ಯಾಚರಣೆ ಶುರು ಮಾಡಿದ್ದಾರೆ. ಲಂಚದ ಹಣ ಸ್ವೀಕರಿಸುತ್ತಿದ್ದಾಗ ಓರ್ವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆಗ ಹವಾಲಾ ಮಾರ್ಗದ ಮೂಲಕ ಈ ಹಣವನ್ನು ತಲುಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ತನಿಖೆ ತೀವ್ರಗೊಳಿಸಿದ ಅಧಿಕಾರಿಗಳು, ಜಿತೇಂದ್ರ ಪಾಲ್ ಸಿಂಗ್ ಮತ್ತು ಇತರ ಖಾಸಗಿ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕಾಗಿ ದೆಹಲಿ, ಅಸ್ಸೋಂದ ಗುವಾಹಟಿ, ಉತ್ತರ ಪ್ರದೇಶದ ನರೋರಾ, ಅಲಿಗಢ ಮತ್ತು ಪಶ್ಚಿಮ ಬಂಗಾಳದ ಸಿಲಿಗುರಿ ಸೇರಿದಂತೆ ಜಿತೇಂದ್ರ ಪಾಲ್ ಸಿಂಗ್ ಹಾಗೂ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಸಹ ನಡೆಸಲಾಗಿದೆ. ಇದೇ ವೇಳೆ 47 ಲಕ್ಷ ರೂಪಾಯಿ ನಗದು, ಲ್ಯಾಪ್ಟಾಪ್ಗಳು ಮತ್ತು ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲ ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ವಿವರಿಸಿದ್ದಾರೆ.
ಇದನ್ನೂ ಓದಿ: 4 ಸಾವಿರ ಕೋಟಿ ರೂ.ಗಳ ಬ್ಯಾಂಕ್ ಸಾಲ ವಂಚನೆ: ಖಾಸಗಿ ಕಂಪನಿ ವಿರುದ್ಧ ಸಿಬಿಐ ಕೇಸ್