ಶ್ರೀನಗರ ( ಜಮ್ಮು ಕಾಶ್ಮೀರ): ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಫ್ರಾನ್ಸ್ ಭೇಟಿಯ ವೇಳೆ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್ ಸೇರಿ ವಿವಿಧ ಗಣ್ಯರಿಗೆ ಭಾರತೀಯ ಸಾಂಸ್ಕೃತಿಕ ಹಿರಿಮೆಯನ್ನು ಸಾರುವ ಉಡುಗೊರೆಗಳನ್ನು ನೀಡಿದ್ದಾರೆ. ಅದರಲ್ಲಿ ಒಂದಾದ ಪ್ರಸಿದ್ಧ ರೇಷ್ಮೆಯಿಂದ ಮಾಡಿದ 'ಕಾಶ್ಮೀರಿ ಕಾರ್ಪೆಟ್' ಅನ್ನು ಫ್ರಾನ್ಸ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಿಗೆ ನೀಡಿದ್ದರು. ಇದು ಕಾಶ್ಮೀರಿ ಕಾರ್ಪೆಟ್ ಉದ್ಯಮಕ್ಕೆ ಉತ್ತೇಜನ ನೀಡಿದೆ. ಪ್ರಧಾನಿ ಮೋದಿ ಅವರ ಈ ನಡೆಯಿಂದ ಕಾರ್ಪೆಟ್ ತಯಾರಿಸುವ ಉದ್ಯಮಿಗಳು ಸಂತಸ ಹೊಂದಿದ್ದಾರೆ. ವಿಶ್ವದಾದ್ಯಂತ ಮುಂದೆ ಈ ಕಾರ್ಪೆಟ್ ಪ್ರಖ್ಯಾತಿ ಹೊಂದಲಿದೆ ಎಂಬ ಆಶಾಭಾವ ಹೊಂದಿದ್ದಾರೆ.
ಶ್ರೀನಗರದಲ್ಲಿ ಕಾರ್ಪೆಟ್ ಉತ್ಪಾದನಾ ಘಟಕ ಹೊಂದಿರುವ ಶಹನವಾಜ್ ಅಹ್ಮದ್ ಸೋಫಿ ಎಂಬುವರು, ಕಣಿವೆಯ ಕಾರ್ಪೆಟ್ ಉದ್ಯಮಕ್ಕೆ ಅಪಾರ ಪ್ರಯೋಜನವನ್ನು ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಿಗೆ ಕಾಶ್ಮೀರಿ ಕಾರ್ಪೆಟ್ ಅನ್ನು ಉಡುಗೊರೆಯಾಗಿ ನೀಡಿದ್ದು ಉತ್ತಮ ಹೆಜ್ಜೆಯಾಗಿದೆ. ಇದು ಕಾಶ್ಮೀರಿ ಕರಕುಶಲತೆಗೆ ಅಪಾರ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಇದು ಕಾರ್ಪೆಟ್ ನೇಕಾರರಿಗೆ ಉತ್ಸಾಹ ಮತ್ತು ಅವರು ರೂಪಿಸುವ ಕಾರ್ಪೆಟ್‌ಗಳ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಪ್ರೋತ್ಸಾಹಿಸುತ್ತದೆ. ಉಡುಗೊರೆಯಾಗಿ ನೀಡಿರುವ ಕಾರ್ಪೆಟ್ 'ರಾಯಲ್ ತಾಜ್' ವಿನ್ಯಾಸವಾಗಿತ್ತು. ಇದು ಅತ್ಯಂತ ಪ್ರಸಿದ್ಧ ವಿನ್ಯಾಸವಾಗಿದೆ. ನುರಿತ ಕುಶಲಕರ್ಮಿಗಳು ಮಾತ್ರ ಈ ವಿನ್ಯಾಸವನ್ನು ತಯಾರಿಸುತ್ತಾರೆ ಎಂದು ಸೋಫಿ ಹೇಳಿದರು.
ಕಾಶ್ಮೀರಿ ಕಾರ್ಪೆಟ್ ಅನ್ನು ವಿಶ್ವಕ್ಕೆ ಪರಿಚಯಿಸಿದ್ದಕ್ಕೆ ನುರಿತ ಕುಶಲಕರ್ಮಿ ಮೊಹಮ್ಮದ್ ರಫೀಕ್ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. "ಕಾಶ್ಮೀರಿ ಕಾರ್ಪೆಟ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರಿ ಕಾರ್ಪೆಟ್ಗೆ ಪ್ರಚಾರ ಸಿಕ್ಕಿದೆ. ಇದಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ವಿದೇಶಿ ಜನರಿಗೆ ಕಾಶ್ಮೀರಿ ಕಾರ್ಪೆಟ್‌ಗಳ ಬಗ್ಗೆ ತಿಳಿದಿಲ್ಲ. ಆದರೆ ಪ್ರಧಾನಿ ಅವರು ಉಡುಗೊರೆಯಾಗಿ ನೀಡುವ ಮೂಲಕ ಪ್ರಚಾರಕ್ಕೆ ತಂದರು. ಇದು ಕಾರ್ಪೆಟ್ ಉದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಜಮ್ಮು ಮತ್ತು ಕಾಶ್ಮೀರ ಕರಕುಶಲ ಇಲಾಖೆಯ ನಿರ್ದೇಶಕ ಮಹಮೂದ್ ಶಾ ಮಾತನಾಡಿ, ಪ್ರಧಾನಿ ಮೋದಿ ಅವರು ತಮ್ಮ ಕಾಶ್ಮೀರಿ ಕರಕುಶಲತೆಯ ವಸ್ತುಗಳ್ನು ಈ ಹಿಂದೆಯೂ ಪ್ರಚಾರಕ್ಕೆ ತಂದಿದ್ದರು. ಸ್ವೀಡನ್ ಭೇಟಿಯ ವೇಳೆ ಅಲ್ಲಿನ ಅಧ್ಯಕ್ಷರಿಗೆ ಪೇಪಿಯರ್ ಕಾಶ್ಮೀರಿ ಶಾಲನ್ನು ಉಡುಗೊರೆಯಾಗಿ ನೀಡಿದ್ದರು. ಅಮೆರಿಕಕ್ಕೆ ಭೇಟಿ ನೀಡಿದಾಗ ಪೇಪರ್ ಪೇಪಿಯರ್ ಮ್ಯಾಚೆ ಬಾಕ್ಸ್‌ಗಳನ್ನು ನೀಡಿದ್ದರು. ಈ ಬಾರಿ ಕಾಶ್ಮೀರದ ರೇಷ್ಮೆ ಕಾರ್ಪೆಟ್ ಅನ್ನು ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಮೆಟಾದ ಚಾಟ್ಬಾಟ್ CM3leon; ಪಠ್ಯ, ಚಿತ್ರ ವಿನ್ಯಾಸಕ್ಕೆ ಬಂದಿದೆ 'ಊಸರವಳ್ಳಿ'