ಬೆಂಗಳೂರು: ಇಂದಿನಿಂದ ಕೋವಿಡ್-19 ಬೂಸ್ಟರ್ ಡೋಸ್ ಆಗಿ ಕಾರ್ಬೆವ್ಯಾಕ್ಸ್ ವ್ಯಾಕ್ಸಿನ್ ಎಲ್ಲ ಲಸಿಕಾ ಕೇಂದ್ರಗಳಲ್ಲಿ ಲಭ್ಯವಾಗಲಿದೆ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ಗಳಿಗೆ ಹೋಲಿಸಿದರೆ ಕಾರ್ಬೆವಾಕ್ಸ್ ಒಂದು ಭಿನ್ನರೂಪದ ವಿಶಿಷ್ಟ ಲಸಿಕೆಯಾಗಿದೆ. ಮೊದಲ ಎರಡು ಡೋಸ್‌ಗಳಾಗಿ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ತೆಗೆದುಕೊಂಡವರಿಗೂ ಇದನ್ನು ನೀಡಬಹುದು. ರೋಗದಿಂದ ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಕೋವಿಡ್-19 ವರ್ಕಿಂಗ್ ಗ್ರೂಪ್‌ನ ಶಿಫಾರಸುಗಳ ಮೇರೆಗೆ ಆರೋಗ್ಯ ಸಚಿವಾಲಯವು ಕಾರ್ಬೆವಾಕ್ಸ್ ಅನ್ನು ತುರ್ತು ಬಳಕೆಯ ಅಧಿಕಾರದ ಅಡಿಯಲ್ಲಿ ಬೂಸ್ಟರ್ ಡೋಸ್ ಆಗಿ ಅನುಮೋದಿಸಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಎನ್.ಕೆ. ಅರೋರಾ, "ಇಂದಿನಿಂದ ಕೋವಿನ್ ಪೋರ್ಟಲ್ ಮೂಲಕ ಬೂಸ್ಟರ್ ಡೋಸ್ ಲಭ್ಯವಿದೆ" ಎಂದರು.
ಪ್ರಾಥಮಿಕ ಕೋವಿಡ್-19 ಡೋಸ್ ಆಗಿ ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡು ಆರು ತಿಂಗಳಾದ 18 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಯಾರಿಗಾದರೂ ಬೂಸ್ಟರ್ ಡೋಸ್ ಆಗಿ ಕಾರ್ಬೆವ್ಯಾಕ್ಸ್ ನೀಡಬಹುದು. ಕಾರ್ಬೆವ್ಯಾಕ್ಸ್ ಭಾರತದ ಪ್ರಥಮ ಅನುಮೋದಿತ ಹೆಟೆರೊಲಾಗಸ್ ಕೋವಿಡ್-19 ಬೂಸ್ಟರ್ ವ್ಯಾಕ್ಸಿನ್ ಆಗಿದೆ.
ಹೈದರಾಬಾದ್ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ ಬಯಾಲಾಜಿಕಲ್ ಇ ಲಿಮಿಟೆಡ್ (ಬಿಇ) ಇದುವರೆಗೆ 10 ಕೋಟಿ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ ಪೂರೈಸಿದೆ.