ನವದೆಹಲಿ: ಮಂಗೋಲಿಯಾದ ವಿಶೇಷ ನಿಯೋಗವನ್ನು ಸ್ವಾಗತಿಸಿದ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ಭಾರತ ಮತ್ತು ಮಂಗೋಲಿಯಾ ನಾಗರಿಕ, ಐತಿಹಾಸಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಕುರಿತು ಮಾತುಕತೆ ನಡೆಸಿದರು.
ಮಂಗೋಲಿಯಾ ರಾಜ್ಯ ಗ್ರೇಟ್ ಹ್ಯೂರಲ್‌ನ ಅಧ್ಯಕ್ಷ ಗೊಂಬೋಜವ್ ಝಂಡಾನ್‌ಶತಾರ್ ನೇತೃತ್ವದ ಸಂಸದೀಯ ನಿಯೋಗ ರಾಷ್ಟ್ರಪತಿ ಭವನದಲ್ಲಿ ರಾಮ್‌ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿತು.
ಈ ವೇಳೆ ಮಾತನಾಡಿರುವ ರಾಷ್ಟ್ರಪತಿ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಸಾಮಾನ್ಯ ಮೌಲ್ಯಗಳು ಮತ್ತು ಆದರ್ಶಗಳು ನಮ್ಮ ಬಂಧವನ್ನು ಬಲಪಡಿಸುತ್ತವೆ. ಭಾರತವು ಮಂಗೋಲಿಯಾದೊಂದಿಗೆ ತನ್ನ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಿರಂತರ ಸಹಕಾರವನ್ನು ಎದುರು ನೋಡುತ್ತಿದೆ. ಈ ಭೇಟಿಯು ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಭಯ ದೇಶಗಳ ನಡುವೆ ಬೌದ್ಧ ಧರ್ಮವು ವಿಶೇಷ ಸಂಪರ್ಕವಾಗಿದೆ. ಹಾಗೆಯೇ ಭಾರತದ ರಾಷ್ಟ್ರೀಯ ಮಿಷನ್ ಮಂಗೋಲಿಯನ್ ಕಂಜುರ್ ಹಸ್ತಪ್ರತಿಗಳನ್ನು ಮುದ್ರಿಸಲು ಕ್ರಮ ಕೈಗೊಂಡಿದೆ. ಗಂಡನ್ ಮಠದಲ್ಲಿ ಬೌದ್ಧ ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಭಾರತವು ನೆರವು ನೀಡುತ್ತಿದೆ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಕೋವಿಡ್ನಿಂದ ಅನಾಥರಾದ ಮಕ್ಕಳ ಮಾರಾಟ: ಸರ್ಕಾರೇತರ ಸಂಸ್ಥೆಯ ವಿರುದ್ಧ ದೂರು
ಹವಾಮಾನ ಬದಲಾವಣೆಯಂಥ ಜಾಗತಿಕ ಸಮಸ್ಯೆಯ ಕುರಿತು ಮಾತನಾಡುತ್ತಾ, ಹವಾಮಾನ ಬದಲಾವಣೆಯ ಪರಿಣಾಮವು ವಿಶೇಷವಾಗಿ ನಮ್ಮಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಸಾಮಾನ್ಯ ಸವಾಲು ಎದುರಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ಈ ನಡುವೆ ಮಂಗೋಲಿಯಾ ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸೇರಲು ನಿರ್ಧರಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಂಗೋಲಿಯಾದಲ್ಲಿ ಭಾರತ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿ, ಮಂಗೋಲಿಯಾದಲ್ಲಿ ತೈಲ ಸಂಸ್ಕರಣಾಗಾರ ಯೋಜನೆಯ ಬಗ್ಗೆ ಸಂತೋಷಪಟ್ಟರು. ಈ ಯೋಜನೆಯು ಎರಡೂ ದೇಶಗಳ ಬಲವಾದ ಸಹಕಾರ ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ಸಂಕೇತವಾಗಿದೆ. ಭಾರತವು ಮಂಗೋಲಿಯಾದ ಇಂಧನ ಭದ್ರತೆಯನ್ನು ಹೆಚ್ಚಿಸುತ್ತಿದ್ದು ಸಮಯೋಚಿತವಾಗಿ ಪೂರ್ಣಗೊಳಿಸಲು ಬದ್ಧವಾಗಿದೆ ಎಂದರು.