ಹಿಮಾಚಲ ಪ್ರದೇಶ: ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಅವಘಡದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಕೇವಲ 29 ವರ್ಷ ವಯಸ್ಸಿನ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜೈಸಿಂಗ್‌ಪುರ ಪ್ರದೇಶದ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಕೂಡ ಸಾವನ್ನಪ್ಪಿದ್ದಾರೆ.
ಹುತಾತ್ಮ ವಿವೇಕ್ ಅವರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರ ಪಿಎಸ್ಒ ಆಗಿದ್ದರು. ಸೈನಿಕನಾಗಿ ಸೇನೆಗೆ ಸೇರಿದ್ದ ವಿವೇಕ್ ಅವರು ಪ್ರಸ್ತುತ ಪ್ಯಾರಾ ಕಮಾಂಡೋ ಆಗಿದ್ದರು.
ವಿವೇಕ್ ಅವರಿಗೆ ವಿವಾಹವಾಗಿ ಕೇವಲ 2 ವರ್ಷವಾಗಿದ್ದು, 2 ತಿಂಗಳ ಮಗುವಿದೆ. ರಾವತ್ ಅವರೊಂದಿಗೆ ತಮಿಳುನಾಡಿಗೆ ತೆರಳುತ್ತಿರುವ ಬಗ್ಗೆ ವಿವೇಕ್ ತಮ್ಮ ಪತ್ನಿಗೆ ಫೋನ್ ಕರೆ ಮೂಲಕ ತಿಳಿಸಿದ್ದರು. ಅದಾದ ಕೆಲ ಗಂಟೆಗಳಲ್ಲೇ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
ಹೆಲಿಕಾಪ್ಟರ್ ಅವಘಡದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತರಾಗಿದ್ದಾರೆ. ವಿವೇಕ್ ಅವರಂತೆ ಕೇವಲ 27 ವರ್ಷದ ಆಂಧ್ರಪ್ರದೇಶ ಮೂಲದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: ಕೇವಲ 27 ವರ್ಷದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ವಿಧಿವಶ!