ಯೋಗ ಎಂಬುದು ಮೂಲಭೂತವಾಗಿ ಅತ್ಯಂತ ಸೂಕ್ಷ್ಮ ವಿಜ್ಞಾನವನ್ನು ಆಧರಿಸಿದ ಆಧ್ಯಾತ್ಮಿಕ ಶಿಸ್ತು ಆಗಿದೆ. ಮನಸ್ಸು ಮತ್ತು ದೇಹಗಳ ನಡುವೆ ಸಾಮರಸ್ಯ ಸಾಧಿಸಲು ಯೋಗ ಪ್ರಬಲ ಸಾಧನವಾಗಿದೆ. ಆರೋಗ್ಯಕರವಾಗಿ ಜೀವಿಸುವ ಕಲೆ ಹಾಗೂ ವಿಜ್ಞಾನ ಎರಡೂ ಯೋಗವಾಗಿದೆ. ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಅಭ್ಯಾಸಗಳ ಮೂಲಕ ಮನಸಿನ ಶಾಶ್ವತ ಶಾಂತಿಯನ್ನು ಸಾಧಿಸಿ ಅದರಿಂದ ತನ್ನನ್ನು ತಾನು ಅರಿಯುವ ಸಾಧನವಾಗಿ ಪ್ರಾಚೀನ ಕಾಲದಲ್ಲಿ ಯೋಗಾಭ್ಯಾಸ ಬೆಳೆಯಿತು.
ಯೋಗ ಶಬ್ದ ಸಂಸ್ಕೃತದ 'ಯುಜ್' ಎಂಬ ಶಬ್ದದಿಂದ ವ್ಯುತ್ಪತ್ತಿಯಾಗಿದೆ. ಯುಜ್ ಎಂದರೆ ಸೇರಿಕೊಳ್ಳು ಅಥವಾ ಒಂದಾಗು ಅಥವಾ ಬೆರೆತುಕೊಳ್ಳು ಎಂಬ ಅರ್ಥಗಳಿವೆ. ಸ್ವಯಂ ಸಾಕ್ಷಾತ್ಕಾರದ ಮೂಲಕ ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದಿ ಮೋಕ್ಷ ಅಥವಾ ಕೈವಲ್ಯ ಸ್ಥಿತಿಗೆ ಏರುವುದೇ ಯೋಗದ ಉದ್ದೇಶವಾಗಿದೆ. ಜೀವನದ ಪ್ರತಿಯೊಂದು ಹಂತದಲ್ಲಿಯೂ ಮುಕ್ತತೆಯಿಂದ ಬದುಕುವುದು, ಆರೋಗ್ಯ ಹಾಗೂ ಸುಮಧುರ ಭಾವವನ್ನು ಹೊಂದುವುದು ಯೋಗದ ಗುರಿಗಳಾಗಿವೆ. ಯೋಗವು ಒಂದು ಆಂತರಿಕ ವಿಜ್ಞಾನವಾಗಿದ್ದು, ವ್ಯಕ್ತಿಯೊಬ್ಬ ಇದರ ವಿವಿಧ ಮಾರ್ಗಗಳನ್ನು ಅನುಸರಿಸುವ ಮೂಲಕ ತನ್ನ ಜೀವನದ ಪರಮೋಚ್ಚ ಗುರಿಯ ಮೇಲೆ ಹಿಡಿತ ಸಾಧಿಸಬಹುದು.
ಆದಿಯೋಗಿ ಶಿವ!
ಮಾನವನ ನಾಗರಿಕತೆಯ ಆರಂಭದಿಂದಲೇ ಯೋಗಾಭ್ಯಾಸ ಆರಂಭವಾಯಿತು ಎಂದು ಹೇಳಲಾಗಿದೆ. ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಯಾವುದೇ ಧರ್ಮ ಅಥವಾ ನಂಬಿಕೆಯ ಸಮುದಾಯಗಳು ಜನ್ಮ ತಾಳುವುದಕ್ಕೂ ಮುಂಚಿನಿಂದಲೂ ಯೋಗ ಈ ಭೂಮಿಯ ಮೇಲಿದೆ. ಯೋಗ ಸಿದ್ಧಾಂತದ ಪ್ರಕಾರ ಭಗವಾನ್ ಶಿವನು ಪ್ರಥಮ ಯೋಗಿ ಅಥವಾ ಆದಿಯೋಗಿ ಎಂದು ಗುರುತಿಸಲ್ಪಟ್ಟಿದ್ದಾನೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಯೋಗ
19ನೇ ಶತಮಾನದ ಕೊನೆ ಹಾಗೂ 20ನೇ ಶತಮಾನದ ಆರಂಭದಲ್ಲಿ ಸ್ವಾಮಿ ವಿವೇಕಾನಂದರು ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಸಂಸ್ಕೃತಿ ಹಿರಿಮೆಯನ್ನು ಯಶಸ್ವಿಯಾಗಿ ಪ್ರಚಾರ ಮಾಡಿದ ನಂತರ ಹಲವಾರು ಯೋಗ ಗುರುಗಳು ವಿದೇಶಗಳಲ್ಲಿ ಯೋಗ ಪ್ರಚಾರಕ್ಕೆ ಮುಂದಾದರು. 1980 ರ ದಶಕದ ಆರಂಭದಲ್ಲಿ ಯೋಗವು ಒಂದು ದೈಹಿಕ ವ್ಯಾಯಾಮದ ರೂಪದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರಿ ಜನಪ್ರಿಯವಾಯಿತು. ಯೋಗದ ಈ ಪ್ರಕಾರವನ್ನು ಹಠ ಯೋಗ ಎಂದು ಕರೆಯಲಾಗುತ್ತದೆ.
ಯೋಗ ಸಾಧನೆಯ ಮೂಲ ಸಿದ್ಧಾಂತಗಳು
ಒಬ್ಬ ವ್ಯಕ್ತಿಯ ಶರೀರ, ಮನಸ್ಸು, ಭಾವನೆ ಹಾಗೂ ಶಕ್ತಿಗಳ ಮೇಲೆ ಯೋಗ ಪ್ರಭಾವ ಬೀರುತ್ತದೆ. ಈ ರೀತಿಯಲ್ಲಿ ಯೋಗವನ್ನು ನಾಲ್ಕು ಪ್ರಮುಖ ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ. ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಕರ್ಮ ಯೋಗ, ಭಾವನೆಗಳಿಗೆ ಸಂಬಂಧಿಸಿದ ಭಕ್ತಿ ಯೋಗ, ಮನಸ್ಸು ಹಾಗೂ ಬುದ್ಧಿಗಳನ್ನು ಸಮ್ಮಿಳಿತಗೊಳಿಸುವ ಜ್ಞಾನ ಯೋಗ ಮತ್ತು ಶಕ್ತಿಯ ಮೇಲೆ ಕೇಂದ್ರೀಕರಿಸುವ ಕ್ರಿಯಾ ಯೋಗ.
ಪ್ರಸ್ತುತ ವಿಶ್ವದಲ್ಲಿ 300 ಮಿಲಿಯನ್ಗೂ ಅಧಿಕ ಜನ ನಿಯಮಿತವಾಗಿ ಯೋಗ ಅಭ್ಯಾಸ ಮಾಡುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಯೋಗ ಫೆಡರೇಶನ್ ಹೇಳಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಮೋದಿ ಪ್ರೇರಣೆ
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರಥಮ ಬಾರಿಗೆ ಪ್ರಸ್ತಾವನೆಯನ್ನು ಮಂಡಿಸಿದ್ದರು. 27 ಸೆಪ್ಟೆಂಬರ್, 2014 ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಈ ಪ್ರಸ್ತಾಪವನ್ನಿಟ್ಟಿದ್ದರು. ಯೋಗವು ವಿಶ್ವಕ್ಕೆ ಭಾರತದ ಅತ್ಯಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಹಾಗೂ ದೇಹಗಳನ್ನು ಸಮ್ಮಿಳಿತಗೊಳಿಸುತ್ತದೆ. ಇದು ಕೇವಲ ವ್ಯಾಯಾಮವಲ್ಲ, ತನ್ನನ್ನು ತಾನು ಅರಿಯುವ ಮಾರ್ಗ ಇದಾಗಿದೆ. ಯೋಗದ ಮೂಲಕ ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡು ಆರೋಗ್ಯಕರ ವಿಶ್ವ ನಿರ್ಮಿಸೋಣ. ಹೀಗಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಎಲ್ಲರೂ ಒಪ್ಪಿಗೆ ಸೂಚಿಸೋಣ ಎಂದು ಪ್ರಧಾನಿ ಮೋದಿ ಅವತ್ತು ವಿಶ್ವಸಂಸ್ಥೆಯಲ್ಲಿ ಹೇಳಿದ್ದರು.
ಪ್ರಧಾನಿ ಮೋದಿಯವರ ಬೇಡಿಕೆಯಂತೆ ಪ್ರತಿವರ್ಷದ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಡಿಸೆಂಬರ್ 11, 2014 ರಂದು ವಿಶ್ವಸಂಸ್ಥೆಯು ಅನುಮೋದನೆ ನೀಡಿತು.