ನವದೆಹಲಿ: ಡಿಆರ್‌ಡಿಒ ಮುಖ್ಯಸ್ಥ ಜಿ.ಸತೀಶ್ ರೆಡ್ಡಿ ಅವರು, ಕ್ಷಿಪಣಿ ವ್ಯವಸ್ಥೆಗಳ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ. ಇದೀಗ ಸಶಸ್ತ್ರ ಪಡೆಗಳಿಗೆ ಬೇಕಾದದ್ದನ್ನು ದೇಶವೇ ಉತ್ಪಾದಿಸಬಹುದು ಎಂದು ತಿಳಿಸಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಕಳೆದ ಐದು ವಾರಗಳಲ್ಲಿ ಹೈಪರ್ಸಾನಿಕ್ ಕ್ಷಿಪಣಿ, ಬ್ರಹ್ಮೋಸ್ ವಿಸ್ತೃತ ಶ್ರೇಣಿಯ ಕ್ಷಿಪಣಿ, ಪೃಥ್ವಿ ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ, ಹೈಪರ್ಸಾನಿಕ್ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿ ವಾಹನಗಳು, ರುದ್ರಂ ಸೇರಿದಂತೆ ಸುಮಾರು 10 ಕ್ಷಿಪಣಿಗಳ ಯಶಸ್ವಿ ಪರೀಕ್ಷೆಗಳನ್ನು ನಡೆಸಿದೆ ಎಂದು ಹೇಳಿದರು.
ದೇಶವು ಕ್ಷಿಪಣಿ ವ್ಯವಸ್ಥೆಯಲ್ಲಿ ಮತ್ತು ವಿಶೇಷವಾಗಿ ಕಳೆದ ಐದರಿಂದ ಆರು ವರ್ಷಗಳಲ್ಲಿ ವಿಕಸನಗೊಂಡಿರುವ ರೀತಿ, ವಿವಿಧ ಪರೀಕ್ಷೆಗಳಲ್ಲಿ ನಡೆದ ವಿವಿಧ ಬೆಳವಣಿಗೆಗಳನ್ನು ಗಮನಿಸಿದರೆ ಭಾರತವು ಕ್ಷಿಪಣಿಗಳ ವಿಭಾಗದಲ್ಲಿ ಸಂಪೂರ್ಣ ಸ್ವಾವಲಂಬನೆಯನ್ನು ಗಳಿಸಿದೆ ಎಂದು ಹೇಳಬಹುದು ಎಂದರು.
ನಮ್ಮ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸಲು ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ಅಭಿವೃದ್ಧಿಗೆ ಡಿಆರ್‌ಡಿಒ ಶ್ರಮಿಸುತ್ತಿದೆ. ಆ ಜವಾಬ್ದಾರಿಯ ಭಾಗವಾಗಿ, ಡಿಆರ್‌ಡಿಒ ಅನೇಕ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್-19 ಅವಧಿಯಲ್ಲಿಯೂ ಸಹ, ವಿಜ್ಞಾನಿಗಳು ಅದರ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಆತ್ಮನಿರ್ಭರ ಭಾರತ್ ಅಭಿಯಾನಕ್ಕೆ ಡಿಆರ್‌ಡಿಒ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದ ಅವರು, ಸ್ಥಳೀಯವಾಗಿ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಕ್ಷಿಪಣಿ ಕ್ಷೇತ್ರದಲ್ಲಿ ನಾವು ಬಲಶಾಲಿಗಳು ಮತ್ತು ನಾವು ಸಂಪೂರ್ಣವಾಗಿ ಸ್ವಾವಲಂಬಿಗಳು ಎಂದು ವಿಶ್ವಾಸದಿಂದ ಹೇಳಬಲ್ಲೆ ಎಂದರು.