ಶ್ರೀನಗರ (ಜಮ್ಮು ಕಾಶ್ಮೀರ): ಯಾವುದೇ ತಾರತಮ್ಯ ಮಾಡದೇ ಜಮ್ಮು ಕಾಶ್ಮೀರದ ಅಭಿವೃದ್ಧಿ ಮಾಡುವುದು ಸರ್ಕಾರದ ಉದ್ದೇಶ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭರವಸೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಉತ್ತಮ ಕೆಲಸ ಮಾಡಿದವರನ್ನು ಗೌರವಿಸುವ ಸಲುವಾಗಿ ಆಯೋಜಿಸಿದ ಸಮಾರಂಭದಲ್ಲಿ ಮಾತನಾಡಿದ ಅವರು ಜಮ್ಮು ಕಾಶ್ಮೀರವನ್ನು ತಾರತಮ್ಯವಿಲ್ಲದೇ ಅಭಿವೃದ್ಧಿ ಮಾಡುವುದಾಗಿ ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ರಾಜಕೀಯ ಮಾಡದೇ ದೇಶದೊಂದಿಗೆ ಸಂಪೂರ್ಣವಾಗಿ ಜಮ್ಮು ಕಾಶ್ಮೀರವನ್ನು ಬೆರೆಯುವಂತೆ ಮಾಡುವುದು ನಮ್ಮ ಉದ್ದೇಶ ಎಂದು ಮನೋಜ್ ಸಿನ್ಹಾ ಸ್ಪಷ್ಟನೆ ನೀಡಿದ್ದಾರೆ.
ದೇಶದೆಲ್ಲೆಡೆ ಇರುವಂತೆ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಮ್ಮು ಕಾಶ್ಮೀರದಲ್ಲಿಯೂ ಜಾರಿಗೊಳಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತದೆ. ಇಡೀ ದೇಶವು ಜಮ್ಮು ಕಾಶ್ಮೀರವನ್ನು ಭರವಸೆಯಿಂದ ನೋಡುತ್ತಿದೆ ಎಂದು ಮನೋಜ್ ಸಿನ್ಹಾ ಹೇಳಿದ್ದಾರೆ.
ಇದರ ಜೊತೆಗೆ ಕೊರೊನಾದಿಂದ ಉಂಟಾದ ಸವಾಲುಗಳನ್ನು ಎದುರಿಸಲು ಅಧಿಕಾರಿಗಳು ಮುಂದಾಗಬೇಕಿದೆ ಎಂದು ಸ್ಥಳೀಯ ಸಂಸ್ಥೆಗಳಿಗೆ ಮನವಿ ಮಾಡಿದ ಲೆಫ್ಟಿನೆಂಟ್ ಗವರ್ನರ್ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.