ಬಲ್ಲಿಯಾ (ಉತ್ತರಪ್ರದೇಶ): ಹಿಂದಿ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತನ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದ್ದು, ಈ ಪ್ರಕರಣದಲ್ಲಿ ಈವರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಪತ್ರಕರ್ತ ರತನ್ ಸಿಂಗ್ (45) ಅವರ ತಂದೆ ನೀಡಿದ ದೂರಿನ ಮೇರೆಗೆ ಆರು ಮಂದಿ ಆರೋಪಿಗಳಾದ ಸುಶೀಲ್ ಸಿಂಗ್, ದಿನೇಶ್ ಸಿಂಗ್, ಅರವಿಂದ್ ಸಿಂಗ್, ಸುನೀಲ್ ಸಿಂಗ್, ವೀರ್ ಬಹದ್ದೂರ್ ಸಿಂಗ್ ಮತ್ತು ವಿನಯ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಯಾದವ್ ಹೇಳಿದರು.
ಈಗಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿ ಸಂತಾಪ ಸೂಚಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಲಖನೌ ಪೊಲೀಸರಿಗೆ ಸಿಎಂ ಯೋಗಿ ಸೂಚನೆ ನೀಡಿದ್ದಾರೆ.
ರಥನ್ ಸಿಂಗ್ ಅವರನ್ನು ಪೆಫಾನಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಆಗಸ್ಟ್ 23ರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಘಟನೆ ಸಂಬಂಧ ಪೆಫಾನಾ ಪೊಲೀಸ್ ಠಾಣೆಯ ಶಶಿ ಮೌಲಿ ಪಾಂಡೆ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಉಳಿದ ಆರೋಪಿಗಳನ್ನು ಬಂಧಿಸುವ ಪ್ರಯತ್ನ ನಡೆದಿದೆ ಎಂದು ಎಎಸ್ಪಿ ತಿಳಿಸಿದ್ದಾರೆ.
ಆರೋಪಿ ಸೋನು ಸಿಂಗ್, ನನ್ನ ಮಗನನ್ನು ರಾತ್ರಿ ಮನೆಗೆ ಕರೆದಿದ್ದಾನೆ. ಅಲ್ಲಿ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ರತನ್ ಸಿಂಗ್ ತಂದೆ ದೂರು ನೀಡಿದ್ದಾರೆ. ಇನ್ನು ಬಲ್ಲಿಯಾ ಕಾರ್ಯನಿರತ ಪತ್ರಕರ್ತರ ಸಂಘ 1 ಕೋಟಿ ರೂ. ಪರಿಹಾರ ಮತ್ತು ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದೆ.