ಮಾಸ್ಕೋ: ರಷ್ಯಾದ ಮೇಕೆ ತೈಮೂರ್, ಈ ಮೇಕೆ 4 ವರ್ಷ ಹುಲಿಯೊಂದಿಗೆ ಅಸಮಾನ್ಯ ಸ್ನೇಹ ಮಾಡಿ ವಿಶ್ವಾದ್ಯಂತ ಖ್ಯಾತಿ ಪಡೆದಿತ್ತು. ಸದ್ಯ ತೈಮೂರ್ ತನ್ನ ಸ್ನೇಹಿತನೊಂದಿಗೆ ಜೀವಿಸಿದ ಅದೇ ಸಫಾರಿಯಲ್ಲಿ ಸಾವನಪ್ಪಿದೆ.
ಹುಲಿಯೊಂದಿಗೆ ಅಪರೂಪದ ಸ್ನೇಹ ಮಾಡಿದ ಮೇಕೆ ತೈಮೂರ್ ನವೆಂಬರ್ 5ರಂದು ಇಲ್ಲಿನ ಸಫಾರಿ ಪಾರ್ಕ್ನಲ್ಲಿ ಸಾವನ್ನಪ್ಪಿದೆ ಎಂದು, ಸಫಾರಿಯ ನಿರ್ದೇಶಕ ಡಿಮಿಟ್ರಿ ಮೆಜೆಂಟ್ಸೆವ್ ತಿಳಿಸಿದ್ದಾರೆ.
2015ರಲ್ಲಿ ಆಮುರ್ (ಹುಲಿ)ಗೆ ಆಹಾರವಾಗಿ ನೀಡಲು ಮೇಕೆಯನ್ನು ಹುಲಿಯ ಆವರಣಕ್ಕೆ ಬಿಡಲಾಗಿತ್ತು. ಆದರೆ ಹುಲಿ ಮೇಕೆಯನ್ನು ಏನೂ ಮಾಡಲಿಲ್ಲ. ಏಕೆಂದರೆ ಹುಲಿಗೆ ಮೇಕೆ ಹೆದರದೇ ಇರುವುದೇ ಕಾರಣವಂತೆ. ಇನ್ನು ತೈಮೂರ್ ಮತ್ತು ಆಮುರ್ ಒಂದೇ ಆವರಣದಲ್ಲಿ ಮಲಗುತ್ತಿದ್ದರು, ಒಟ್ಟಿಗೆ ತಿನ್ನುತ್ತಿದ್ದರು ಮತ್ತು ಆಡುತ್ತಿದ್ದರು. ಹುಲಿ ಮೇಕೆಗೆ ಬೇಟೆಯನ್ನು ಹೇಗೆ ಹಿಡಿಯಬೇಕೆಂದು ಸಹ ಕಲಿಸಲು ಪ್ರಯತ್ನಿಸಿತ್ತು ಎಂದು ಸಫಾರಿ ನಿರ್ದೇಶಕರು ಇಬ್ಬರ ಸ್ನೇಹವನ್ನು ವಿವರಿಸಿದರು.
2016ರಲ್ಲಿ ಮೇಕೆ ಹುಲಿಗೆ ಕಿರಿ ಕಿರಿ ಉಂಟುಮಾಡಿದಾಗ ಆಮುರ್ ತನ್ನ ತಾಳ್ಮೆಯನ್ನ ಕಳೆದುಕೊಂಡು ತೈಮೂರ್ಅನ್ನು ಹಿಡಿದು ಬಿಸಾಡಿತ್ತು. ತೀವ್ರವಾಗಿ ಗಾಯಗೊಂಡ ಮೇಕೆಯನ್ನ ಸಫಾರಿ ಸಿಬ್ಬಂದಿ ಚಿಕಿತ್ಸೆಗಾಗಿ ಕಳುಹಿಸಿತು. ಆದರೆ ತೈಮೂರ್ ಪೂರ್ಣವಾಗಿ ಗುಣಮುಖವಾಗಿರಲಿಲ್ಲ. ಇದರಿಂದ ಹಂತ ಹಂತವಾಗಿ ಆರೋಗ್ಯ ಕ್ಷೀಣಿಸುತ್ತಾ ಬಂದು, ಕೊನೆಗೆ ನವೆಂಬರ್ 5ರಂದು ಸಾವನಪ್ಪಿದೆ. ಇನ್ನು ತೈಮೂರ್ನ ಅಸಹಜ ಸ್ನೇಹದ ಗುರುತಿಗಾಗಿ ಸಫಾರಿ ಆಡಳಿತ ಮಂಡಳಿ, ಸಮಾಧಿ ಬಳಿ ಕಂಚಿನ ಪ್ರತಿಮೆ ಮಾಡಲು ನಿರ್ಧರಿಸಿದೆ.