ಭರತ್ಪುರ್(ರಾಜಸ್ಥಾನ): ಎಂಟು ತಿಂಗಳ ಗರ್ಭಿಣಿವೋರ್ವಳ ಮೇಲೆ ಇಬ್ಬರು ದುಷ್ಕರ್ಮಿಗಳು ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದರಿಂದ ಶಿಶುವೊಂದು ಹೊಟ್ಟೆಯಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಭರತ್ಪುರ್ದಲ್ಲಿ ನಡೆದಿದೆ.
ಗರ್ಭಿಣಿ ಮೇಲೆ ಸಂಬಂಧಿಕರಿಬ್ಬರು ಹಲ್ಲೆ ನಡೆಸಿದ್ದು, ಇದರಿಂದ ಗರ್ಭದಲ್ಲಿ 8 ತಿಂಗಳ ಶಿಶು ಸಾವನ್ನಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ಆಕೆಯ ಗಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ನವಜಾತ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರ ಮಾಡಲಾಗಿದೆ.
ಮಂಜು ಎಂಬ ಮಹಿಳೆ ತನ್ನ ಗಂಡನೊಂದಿಗೆ ಬಾರೌಲಿಚಾರ್ ಗ್ರಾಮದಲ್ಲಿ ವಾಸವಾಗಿದ್ದರು. ಆಸ್ತಿ ವಿಚಾರವಾಗಿ ಮಂಜು ಪತಿ ಸುಮಂತ್ ಹಾಗೂ ಕುಟುಂಬದ ನಡುವೆ ಅನೇಕ ವರ್ಷಗಳಿಂದ ಜಗಳ ನಡೆಯುತ್ತಿತ್ತು. ನಿನ್ನೆ ಇದ್ದಕ್ಕಿದ್ದಂತೆ ಆಗಮಿಸಿರುವ ಕೆಲವರು ಗರ್ಭಿಣಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆಕೆಯ ಹೊಟ್ಟೆಗೆ ಒದ್ದಿದ್ದಾರೆ. ಈ ವೇಳೆ ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಮಗು ಹೊರತೆಗೆಯಲಾಗಿದ್ದು, ಅದು ಗರ್ಭದಲ್ಲೇ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಇದೀಗ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಗಳ ಬಂಧನ ಮಾಡುವ ಭರವಸೆ ನೀಡಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.