ರಾಜೌರಿ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದ ಭೂಪ್ರದೇಶಕ್ಕೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ಮೂಲದ ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೆಡೆಮುರಿ ಕಟ್ಟಿದೆ.
ನೌಶೇರಾ ಸೆಕ್ಟರ್‌ನಲ್ಲಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರ ವಿರುದ್ಧ ಮೇ 28, 2020 ರಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆ ಮೂವರು ಉಗ್ರರನ್ನು ಸದೆಬಡಿದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಭಾರೀ ಪ್ರಮಾಣದಲ್ಲಿ ಶಸ್ತ್ರಸಜ್ಜಿತರಾಗಿದ್ದ ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದೆ. ಸದ್ಯ ದೇಶದ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ಸೇನಾ ಮೂಲಗಳು ತಿಳಿಸಿವೆ.
ನಾಲ್ಕು ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ 2 ಎಕೆ 47 ರೈಫಲ್, ಒಂದು ಎಂ 16 ಎ 2 ರೈಫಲ್, ಒಂದು ಪಿಸ್ತೂಲ್, ಒಂದು ಯುಬಿಜಿಎಲ್, ಮದ್ದುಗುಂಡು ಮತ್ತು ಗ್ರೆನೇಡ್‌ಗಳು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸೈನಿಕರು ವಶಪಡಿಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಭಯೋತ್ಪಾದಕರು ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ ನಂತರ ಒಳನುಸುಳುಕೋರರ ವಿರುದ್ಧ ಸೇನೆ ಸಮರ ಸಾರಲು ಪ್ರಾರಂಭಿಸಿತ್ತು.