ಗುಂಟೂರು(ಆಂಧ್ರಪ್ರದೇಶ): ಈ ಪ್ರತಿಭೆಗೆ ಬಡತನ ಅಡ್ಡಿ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನಗೆದ್ದ ಗ್ರಾಮೀಣ ಭಾಗದ ಬಾಡಿ ಬಿಲ್ಡರ್ ತನ್ನ ಮುಂದಿನ ಹೆಜ್ಜೆಯನ್ನು ಧೈರ್ಯವಾಗಿಡಲು ದಾನಿಗಳ ನೆರವು ಕೇಳುತ್ತಿದ್ದಾರೆ.
ಹೌದು, ಇವರ ಹೆಸರು ನಿಶ್ಶಂಕರರಾವ್ ರವಿಕುಮಾರ್. ನೆರೆಯ ಆಂಧ್ರಪ್ರದೇಶದ ಗುಂಟೂರಿನ ಎಟುಕೂರ್ ಗ್ರಾಮದ ಬಾಡಿ ಬಿಲ್ಡರ್. ಅಪ್ಪಟ ನಾಟಿ ಪ್ರತಿಭೆಯಾದರೂ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಈತನ ಸಾಧನೆ ಅಷ್ಟಿಷ್ಟೇನಲ್ಲ. ಈ ವರ್ಷ ಇಂಡೋನೇಷ್ಯಾದಲ್ಲಿ ನಡೆದ ಮಿಸ್ಟರ್ ಏಷಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಈತ ಬಂಗಾರ ಗೆದ್ದಿದ್ದಾರೆ. ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದ ರವಿಕುಮಾರ್, ಸತತ ಅಭ್ಯಾಸ ಹಾಗೂ ನಿರಂತರ ಪ್ರಯತ್ನದಿಂದ ಈ ಬಾರಿ ಬಂಗಾರಕ್ಕೆ ಮುತ್ತಿಟ್ಟಿದ್ದಾರೆ. ಈವರೆಗೂ ಹಲವಾರು ರಾಷ್ಟ್ರ ಹಾಗೂ ಅಂತಾರಾಷ್ಟ್ರಿಯ ಪದಕಗಳನ್ನು ಗೆದ್ದಿರುವ ರವಿಕುಮಾರ್ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ.
ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಸ್ಫೂರ್ತಿ...
ಇನ್ನು ರವಿಕುಮಾರ್ ಅವರ ಈ ಸಾಧನೆಗೆ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಸ್ಫೂರ್ತಿಯಂತೆ. ಅರ್ನಾಲ್ಡ್ ಶ್ವಾರ್ಜಿನೆಗ್ಗರ್, ಓರ್ವ ವೃತ್ತಿಪರ ಬಾಡಿಬಿಲ್ಡರ್. ಮಾತ್ರವಲ್ಲ ಖ್ಯಾತ ರಾಜಕಾರಣಿ, ನಟ, ಲೇಖಕ ಎಲ್ಲವೂ ಹೌದು. ಸಾಮಾನ್ಯ ಟ್ರಕ್ ಡ್ರೈವರ್ ಆಗಿದ್ದ ಇವರ ಜೀವನದ ಯಶೋಗಾಥೆಯನ್ನೇ ಸ್ಫೂರ್ತಿಯನ್ನಾಗಿ ಮಾಡಿಕೊಂಡ ರವಿ ಈ ಸಾಧನೆ ಮಾಡಿದ್ದಾರೆ. ಪ್ರತಿಭೆಗೆ ಬಡತನ ಅಡ್ಡಿಯಾಗಲ್ಲ. ಆದರೆ ಅದೇ ಪ್ರತಿಭೆ ಬೆಳೆಯಲು ಆರ್ಥಿಕ ಸಹಾಯ ಬೇಕು ಎನ್ನುತ್ತಾರೆ ರವಿಕುಮಾರ್.
ಪ್ರತಿನಿತ್ಯ 8 ಗಂಟೆಗಳ ಕಾಲ ಇವರು ಜಿಮ್ನಲ್ಲಿ ದೇಹದಂಡಿಸುತ್ತಾರೆ. ಇದಕ್ಕಾಗಿ ತಜ್ಞರೊಡನೆ ಚರ್ಚಿಸಿ ವಿಭಿನ್ನ ಆಹಾರ ಕ್ರಮವನ್ನೂ ಅನುಸರಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಗೆ ಆಯ್ಕೆಯಾಗಲು ಸತತ ಕಷ್ಟಪಟ್ಟು ಅಭ್ಯಾಸ ಮಾಡಿದ್ದಾರೆ ರವಿಕುಮಾರ್.
ಮುಂದಿನ ತಿಂಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ದೇಹದಾರ್ಢ್ಯ ಸ್ಪರ್ಧೆಗೆ ರವಿಕುಮಾರ್ ಆಯ್ಕೆಯಾಗಿದ್ದಾರೆ. ಆದರೆ ಬಡತನ ಈ ಪ್ರತಿಭೆಯನ್ನು ಕಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರೂ ಇದುವರೆಗೂ ಯಾವೊಬ್ಬ ಸರ್ಕಾರದ ಪ್ರತಿನಿಧಿಯೂ ಬಂದು ಸಹಾಯ ಮಾಡಿಲ್ಲವಂತೆ. ಹೀಗಾಗಿ ಹಣಕಾಸಿನ ಸಂಕಷ್ಟದಿಂದಾಗಿ ರವಿಕುಮಾರ್ಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗುತ್ತಿಲ್ಲವಂತೆ. ಹೀಗಾಗಿ ರವಿಕುಮಾರ್ ಸರ್ಕಾರ ಮತ್ತು ದಾನಿಗಳ ಮೊರೆ ಹೋಗಿದ್ದಾರೆ.
ಈ ಮೂಲಕವಾದರೂ ಈ ಗ್ರಾಮೀಣ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ.