ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ, ನಿಜಾಮಾಬಾದ್ ಮಾಜಿ ಸಂಸದೆ ಕಲ್ವಕುಂಟ್ಲಾ ಕವಿತಾ ಅವರು ಎಂಎಲ್‌ಸಿ ಆಗಿ ಆಯ್ಕೆ ಆಗಿದ್ದಾರೆ. ಇಂದಿನ ಚುನಾವಣಾ ಫಲಿತಾಂಶದಿಂದ ಅವರು ಮತ್ತೆ ರಾಜಕೀಯಕ್ಕೆ ಕಾಲಿರಿಸಿದ್ದಾರೆ.
ನಿಜಾಮಾಬಾದ್ ಎಂಎಲ್‌ಸಿ ಸ್ಥಾನಕ್ಕೆ ಶುಕ್ರವಾದ ಚುನಾವಣೆ ನಡೆಸಲಾಗಿತ್ತು. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕವಿತಾ, ಭಾರಿ ಬಹುಮತದೊಂದಿಗೆ ಆಯ್ಕೆ ಆಗಿದ್ದಾರೆ. ಒಟ್ಟು 823 ರಲ್ಲಿ 728 ಮತಗಳನ್ನು ಗಳಿಸಿ ಭರ್ಜರಿ ಜಯ ಸಾಧಿಸಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) 56 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ ಪಕ್ಷವು ಕೇವಲ 28 ಮತಗಳನ್ನು ಪಡೆಯಲು ಶಕ್ತವಾಯಿತು. ಕವಿತಾ ಅವರು 2019 ರ ಸಂಸತ್ ಚುನಾವಣೆಯಲ್ಲಿ ತಮ್ಮ ಬಿಜೆಪಿ ಪ್ರತಿಸ್ಪರ್ಧಿ ಡಿ ಅರವಿಂದ್ ವಿರುದ್ಧ ಸೋಲು ಅನುಭವವಿಸಿದ್ದರು. ಇಂದಿನ ಉಪಚುನಾವಣೆಗಳಲ್ಲಿ ಭರ್ಜರಿ ಜಯದೊಂದಿಗೆ ಅವರು ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಿದ್ದಾರೆ.